ಪ್ರಪಂಚದಲ್ಲಿ ಯುವ ಜನರ ಸಂಖ್ಯೆ ಹಿಂದಿಗಿಂತಲೂ ಇಂದು ಹೆಚ್ಚು. ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆಯಲು ಇದೊಂದು ಅಭೂತಪೂರ್ವ ಶಕ್ತಿಯಾಗಿದೆ. ಭಾರತದೇಶವು ಪ್ರಪಂಚದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ಹಾಗೂ ಅತೀ ಹೆಚ್ಚು ಯುವ ಜನರಿಂದ ಕೂಡಿದ ದೇಶವಾಗಿದೆ. ಜಾಗತೀಕರಣ ಮತ್ತು ಉದಾರೀಕರಣಗಳು ಇಂದಿನ ಯುವ ಜನರಲ್ಲಿ ನಿಧಾನಗತಿಯ ಸಾಂಸ್ಕೃತಿಕ ಪರಿವರ್ತನೆಗೆ ಪ್ರಭಾವ ಬೀರುತ್ತಿದೆ. ಈ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಅವರು ಸಾಮಾಜಿಕ, ಮಾನಸಿಕ ಆರೋಗ್ಯ ಮತ್ತು ವರ್ತನಾ ಸವಾಲುಗಳನ್ನು ಎದುರಿಸಬೇಕಿದೆ. ಯುವ ಜನರು ಮುಂದಿನ ಭವಿಷ್ಯದ ನಿರ್ಮಾತೃಗಳು ಹಾಗೂ ನಾಯಕರಾಗಿದ್ದಾರೆ. ಇದು ಸಾಕಾರಗೊಳ್ಳಲು ಅವರು ತಮ್ಮ ಜೀವನದಲ್ಲಿ ಕೌಶಲ್ಯ, ಆರೋಗ್ಯ, ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಉಪಯುಕ್ತ ಆಯ್ಕೆಗಳನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದು ಸಶಕ್ತರಾಗಬೇಕಿದೆ.
ಭಾರತದಲ್ಲಿನ ಯುವ ಜನರ ಅಭಿವೃದ್ಧಿ ಹಲವಾರು ಕಾರಣಗಳಿಂದಾಗಿ ಕುಂಠಿತಗೊಂಡಿದೆ. ಭಾರತದ ಯುವ ಜನ ಸಂಖ್ಯೆಯು ೨೦೧೧ರ ಜನಗಣತಿಯ ಪ್ರಕಾರ ಸುಮಾರು ೩೭೫ ದಶ ಲಕ್ಷದಷ್ಟಿದೆ . ಯುವ ಜನರ ಅಭಿವೃದ್ಧಿಗಾಗಿ ಬೆರಳೆಣಿಕೆಯಷ್ಟು ಮಾತ್ರ ವೃತ್ತಿಪರರು (ಸಮಾಲೋಚಕರು, ಮನೋವೈದ್ಯರು, ಮನಃಶಾಸ್ತಜ್ಞರು, ಸಾಮಾಜಿಕ ಕಾರ್ಯಕರ್ತರು ಇತ್ಯಾದಿ) ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ.
ಈ ಪರಿಸ್ಥಿತಿ ಹಾಗು ಅವಶ್ಯಕತೆಯನ್ನು ಮನಗಂಡು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು “ಯುವ ಸ್ಪಂದನ” ಎಂಬ ಕಾರ್ಯಕ್ರಮವನ್ನು ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಇವರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಇಂತಹ ಸಮುದಾಯ ಆರೋಗ್ಯ ಸಂವರ್ಧನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪರಿಣತಿ ಹೊಂದಿರುವ ನಿಮ್ಹಾನ್ಸ್ ಸಂಸ್ಥೆಯು ಕರ್ನಾಟಕದ ಯುವ ಜನರಿಗೆ “ಯುವ ಸ್ಪಂದನ” ಎಂಬ ವಿನೂತನ ಕಾರ್ಯಕ್ರಮವನ್ನು ತರುವಲ್ಲಿ ಸಹಾಯ ಮಾಡಿದೆ.
ಭಾರತದಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಜಾರಿಗೆ ತಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಇವರಿಗೆ ಹೃರ್ತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದರಿಂದಾಗಿ ಭಾರತದಲ್ಲಿ ಇಂತಹ ಯುವಜನ ಸ್ನೇಹಿ, ಯುವಜನ ಚಾಲಿತ, ಕಾರ್ಯಕ್ರಮದಿಂದ ಒಟ್ಟಾರೆ ಯುವಜನ ಆರೋಗ್ಯ ಮತ್ತು ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ನಾನು ಬಲವಾಗಿ ನಂಬಿದ್ದೇನೆ.