ನನ್ನ ಹೆಸರು ಮಂಜುಳಾ. ನಮ್ಮದು ತುಂಬಾ ಬಡ ಕುಟುಂಬ, ತಂದೆ ದಿನಗೂಲಿ ಕೆಲಸ ಮಾಡುತ್ತಾರೆ. ಅವರಿಗೆ ನಾವು ಮೂರು ಜನ ಹೆಣ್ಣು ಮಕ್ಕಳು ಅದರಲ್ಲಿ ನಾನೇ ಮೊದಲನೆಯವಳು. ನಾನು ಪಿ.ಯು.ಸಿ ಓದುತ್ತಿದ್ದೇನೆ. ನಮ್ಮ ಮನೆಯ ಕಡೆ ಅಷ್ಟು ಸ್ಥಿತಿವಂತರಾಗಿರದ ಕಾರಣ ನನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಲು ಹೇಳುತ್ತಿದ್ದರು. ನನಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮತ್ತು ಓದು ಮುಂದುವರಿಸಬೇಕು ಎಂಬ ಆಸೆ ಇತ್ತು. ನನ್ನ ತಂದೆಗೆ ಅದನ್ನು ತಿಳಿಹೇಳಿದರೂ ಅರ್ಥಮಾಡಿಕೊಳ್ಳುತ್ತಿರಲಿಲ್ಲ ಮತ್ತು ಅವರು ನನಗೆ ಬೈಯುತ್ತಿದ್ದರು. ನೀನು ಕಾಲೇಜು ಮುಂದುವರಿಸುದು ಬೇಡ ಕೆಲಸಕ್ಕೆ ಹೋಗು ಇಲ್ಲ ಮನೆಯಲ್ಲೇ ಇದ್ದು ಮನೆಕೆಲಸ ಮಾಡು ಎಂದು ಹೇಳಿದಾಗ, ನನಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ.
ಇದನ್ನೆಲ್ಲಾ ಅಮ್ಮನ ಜೊತೆ ಹೇಳಿಕೊಂಡಾಗ ಅವರೂ ಸಹ ಕಷ್ಟ ಇದೆ ಅರ್ಥ ಮಾಡಿಕೋ ಎಂದು ಹೇಳುತ್ತಿದ್ದರು. ಅದರಿಂದ ನನಗೆ ತುಂಬಾ ಬೇಸರವಾಗುತ್ತಿತ್ತು. ಹಾಗಾಗಿ, ನಾನು ಒಂದು ಅಂಗಡಿಯಲ್ಲಿ ಸಂಜೆವೇಳೆಯ ಕೆಲಸಕ್ಕೆ ಸೇರಿಕೊಂಡೆ. ಆದರೆ ಇದರಿಂದ ದೊರೆಯುತಿದ್ದ ೨೦೦೦ ರೂಪಾಯಿಗಳು ಯಾವುದಕ್ಕೂ ಸಾಲುವುದಿಲ್ಲ ಎಂದು ತಂದೆ ತಿಳಿಸಿದರು. ಕಾಲೇಜು ಬಿಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಏನು ಮಾಡಬೇಕೆಂಬುದು ತಿಳಿಯದಾಗಿತ್ತು.
ಈ ಸಮಯದಲ್ಲಿ ಏನಾದರು ಸಹಾಯ ಸಿಗಬಹುದು ಎಂಬ ಕಾರಣಕ್ಕೆ ನಮ್ಮ ಕಾಲೇಜಿನಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ನಡೆಸಿಕೊಟ್ಟಿದ್ದ ಯುವ ಪರಿವರ್ತಕರನ್ನು ಸಂಪರ್ಕಿಸಿದೆ. ಅವರು ಯುವ ಸ್ಪಂದನ ಕೇಂದ್ರಕ್ಕೆ ಬರಲು ಹೇಳಿದರು. ಹಾಗಾಗಿ ನಾನು ಯುವಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿದೆ. ಅಲ್ಲಿ ಯುವ ಸಮಾಲೋಚಕರು ನನ್ನ ಬಳಿ ಮಾತನಾಡಿದರು. ನನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟರು. ನಾನು ನನ್ನ ನೋವನ್ನೆಲ್ಲಾ ಅವರ ಬಳಿ ಹಂಚಿಕೊಂಡೆ.
ಈ ಸಮಸ್ಯೆಯನ್ನು ನಿಮಗೆ ಸುಲಭವಾಗಿ ನಿಭಾಹಿಸಲು ಸಾಧ್ಯ ಎಂದು ಧೈರ್ಯ ತುಂಬಿದರು. ಕಾಲೇಜು ವಿದ್ಯಾಭ್ಯಾಸ ಮುಂದುವರಿಸುತ್ತಾ ಹೇಗೆ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬಹುದು ಎಂಬ ವಿಷವಾಗಿ ಚರ್ಚೆಯನ್ನು ನಡೆಸಿದಾಗ ಹಲವಾರು ಮಾರ್ಗಗಳು ದೊರಕಿದವು. ನನ್ನ ಮತ್ತು ನನ್ನ ತಂಗಿಯರ ತಿಂಗಳ ಖರ್ಚು ಎಷ್ಟು ಎಂದು ಲೆಕ್ಕ ಹಾಕಿ ಎಲ್ಲೆಲ್ಲಿ ಕಡಿಮೆಮಾಡಲು ಸಾಧ್ಯವೋ ಅಲ್ಲಿ ಉಳಿತಾಯ ಮಾಡಲು ನಿರ್ಧರಿಸಿದೆ. ಪಾರ್ಟ್ ಟೈಮ್ ಕೆಲಸ ಕಷ್ಟವಾಗದಿದ್ದ ಕಾರಣ ಸ್ವಲ್ಪ ಹೆಚ್ಚು ಸಮಯ ಕೆಲಸ ಮಾಡಲು ನಿರ್ಧರಿಸಿದೆ. ಜೊತೆಗೆ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ಪಡೆದು ಅರ್ಜಿ ಸಲ್ಲಿಸಿದೆ. ಮನೆಯಲ್ಲಿ ಬಿಡುವಿದ್ದ ಸಮಯದಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸಲು ತಾಯಿ ಮತ್ತು ತಂಗಿಯರನ್ನು ಪ್ರೇರೇಪಿಸಿದೆ. ತಂದೆಯ ಜೊತೆ ಇವೆಲ್ಲದರ ಬಗ್ಗೆ ಮಾತನಾಡಿದೆ ಜೊತೆಗೆ ನಾನು ವಿದ್ಯಾಭ್ಯಾಸ ಮುಂದುವರಿಸಿ ಒಳ್ಳೆಯ ಕೆಲಸ ಪಡೆದು ಕುಟುಂಬಕ್ಕೆ ನೆರವಾಗಬೇಕು ಎಂಬ ನನ್ನ ಉದ್ದೇಶವನ್ನು ಅವರಿಗೆ ಮನವರಿಕೆ ಮಾಡಿದೆ. ಸದ್ಯ ನಾನು ಕಾಲೇಜಿಗೂ ಹೋಗುತ್ತಿದ್ದೇನೆ, ಕೆಲಸದಲ್ಲೂ ತೊಡಗಿದ್ದೇನೆ. ಯುವಸಮಾಲೋಚಕರು ನೀಡಿದ ಮಾರ್ಗದರ್ಶನದಿಂದ ಸಂಧಿಗ್ದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಇದಕ್ಕಾಗಿ ಯುವ ಸ್ಪಂದನ ಕೇಂದ್ರಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು.