ಯವ ಜನಾಂಗ ಬಾಲ್ಯದಿಂದ ಪ್ರೌಢಾವಸ್ಥೆಗೆ ಸುಗಮವಾಗಿ ಸಾಗಲು ಸಾಧ್ಯವಾಗುವಂತೆ ‘ಯುವ ಸ್ಪಂದನ’ ಕಾರ್ಯಕ್ರಮವು ಯುವ ಜನಾಂಗ, ಅವರ ಕುಟುಂಬಗಳು ಮತ್ತು ಸದಾ ಬದಲಾಗುತ್ತಿರುವ ಸಮಾಜದ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲಿ ಪ್ರಯತ್ನಿಸುತ್ತಿದೆ. ಯುವಜನರ ಗೊಂದಲಗಳು, ಅವಶ್ಯಕತೆಗಳು ಮತ್ತು ಇತರೆ ವಿಷಯಗಳ ಬಗ್ಗೆ ಅರಿವು ಮೂಡಿಸಿ, ಕುಟುಂಬ ಹಾಗೂ ಸಮಾಜವನ್ನು ಯುವಜನರು ತಮ್ಮನ್ನು ತಾವು ಮುಕ್ತವಾಗಿ ಅಭಿವ್ಯಕ್ತಪಡಿಸಿಕೊಳ್ಳಲು ಸಾಧ್ಯವಾಗುವಂತ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಲು ಈ ಕಾರ್ಯಕ್ರನವನ್ನು ಯೋಜಿಸಲಾಗಿದೆ.

ಯುವ ಸ್ಪಂದನ ಕಾರ್ಯಕ್ರಮವನ್ನು ೧೬ ರಿಂದ ೩೫ ವಯೋಮಾನದವರಿಗಾಗಿ ರೂಪಿಸಲಾಗಿದೆ. ನಮ್ಮ ರಾಜ್ಯದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಯುವ ಶಕ್ತಿಯನ್ನು ಸಕಾರಾತ್ಮಕ ಚಟುವಟಿಕೆಗಳೆಡೆಗೆ ಒಯ್ಯುವ ಪ್ರಯತ್ನ ಈ ಕಾರ್ಯಕ್ರಮಕ್ಕಿದೆ. ಇಂದಿನ ಯುವಜನರೇ ನಾಳಿನ ಪ್ರಜೆಗಳು, ಮುಂದಿನ ಯುವಜನರು ಸಕಾರಾತ್ಮಕ ಶಕ್ತಿಯಿಂದ ಕೂಡಿರಲು ಅನುವಾಗುವಂತೆ ಅವರಿಗೆ ಆರೋಗ್ಯಕರ ಮನಃಸ್ಥಿತಿಯು ಬೇಕಿದೆ. ಹಾಗಾಗಿ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈ ವಿನೂತನ ಕಾರ್ಯಕ್ರಮವು ಯುವಜನರನ್ನು ನಿಮ್ಹಾನ್ಸ್ನ ಜನ ಆರೋಗ್ಯ ಕೇಂದ್ರದ ತಾಂತ್ರಿಕ ಬೆಂಬಲದಿಂದ ಯೋಜಿತವಾದ ಈ ಕಾರ್ಯಕ್ರಮ ಯುವ ಜನರನ್ನು ಪರಿವರ್ತನೆಯ ಹರಿಕಾರರನ್ನಾಗಿ ಉಪಯೋಗಿಸಿಕೊಳ್ಳುವುದರಿಂದ ನಾಳಿನ ಸಂತುಷ್ಟ ಹಾಗೂ ಸುರಕ್ಷಿತ ಸಮಾಜಕ್ಕೆ ಉತ್ತಮ ಬಂಡವಾಳ ಹೂಡಿದಂತಾಗಿದೆ.

ಯುವ ಸ್ಪಂದನ ಕಾರ್ಯಕ್ರಮದ ಮೂಲಕ ನಿಮ್ಹಾನ್ಸ್ ನ ಜನ ಆರೋಗ್ಯ ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸೇರಿ, ಉದ್ದೇಶಿತ ಯುವ ಸಬಲೀಕರಣ ಕೇಂದ್ರಗಳಲ್ಲಿ ಒಂದು ಸಂಕೀರ್ಣ ಆರೋಗ್ಯ ಸಂವರ್ಧನ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ಯಾಕೆ ಯುವ ಸ್ಪಂದನ ಕಾರ್ಯಕ್ರಮ?

ಒಬ್ಬ ವ್ಯಕ್ತಿಯ ಜೀವನದಲ್ಲಿ ಪ್ರೌಢಾವಸ್ಥೆಯನ್ನು ರೂಪಿಸುವ ಯೌವನವು ಒಂದು ಪ್ರಮುಖ ಘಟ್ಟವಾಗಿದೆ. ಯೌವನ ಕಾಲಘಟ್ಟವು ವಿಶಿಷ್ಠವಾದ ಸವಾಲುಗಳೊಂದಿಗೆ ಕೂಡಿದ್ದು, ವಿಶೇಷ ಅಗತ್ಯತೆಗಳನ್ನು ಬಯಸುವಂತಹ ಪರಿವರ್ತನಾ ಕಾಲ. ಇವುಗಳು ದೈಹಿಕ, ಸಾಮಾಜಿಕ, ಮಾನಸಿಕ, ಸ್ವಾಭಾವಿಕ ಮತ್ತು ಆಧ್ಯಾತ್ಮಿಕ ಸವಾಲುಗಳಾಗಿರಬಹುದು. ಈ ಅಂಶಗಳು ಯುವ ಜನರ ಸಂತೋಷದಾಯಕ ಮತ್ತು ಉತ್ಪಾದಕ ಜೀವನ ನಡೆಸಲು ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುತ್ತವೆ.
೨೦೧೧ನೇಯ ಜನಗಣತಿಯ ಪ್ರಕಾರ ಭಾರತದಲ್ಲಿನ ಯುವ ಜನರ ಸಂಖ್ಯೆ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚಾಗಿದ್ದು ಸುಮಾರು ೫೫೦ ಮಿಲಿಯನ್ ಎಂದು ಅಂದಾಜಿಸಲಾಗಿದೆ. ಭಾರತದ ಜನಸಂಖ್ಯೆಯ ಶೇಕಡಾ ೭೦ ರಷ್ಟು ೩೫ ವರ್ಷಗಳಿಗಿಂತಲೂ ಕಡಿಮೆ ವಯೋಮಾನದವರಿದ್ದಾರೆನ್ನಲಾಗಿದೆ. ಈ ಅಪಾರ ಸಂಖ್ಯೆಯ ಜನ ಸಮೂಹವನ್ನು ಭಾರತದ ಅಭಿವೃದ್ಧಿಯ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಯುವಜನತೆ ಆರೋಗ್ಯಕರ ಹಾಗೂ ಸಂತುಷ್ಟರಾಗಿರುವುದು ಅವಶ್ಯಕವಾಗಿದೆ.
  • ಯೌವನವು ಜೀವನದ ಒಂದು ನಿರ್ಣಾಯಕ ಘಟ್ಟ
  • ಯುವ ಜನತೆಗೆ ದೈಹಿಕ, ಸಾಮಾಜಿಕ, ಮಾನಸಿಕ, ವರ್ತನೆ ಸಂಬಂಧಿತ ಮತ್ತು ಮಾನಸಿಕ ಅವಶ್ಯಕತೆಗಳಿವೆ.
  • ಯುವಜನರು ದೇಶದ ಮತ್ತು ಕರ್ನಾಟಕದ ಒಟ್ಟು ಜನಸಂಖ್ಯೆಯ ೧/೩ ಭಾಗದಷ್ಟು ಇದ್ದಾರೆ
  • ನಾಲ್ಕನೇ ಒಂದರಷ್ಟು ಯುವ ಜನಾಂಗ ಅನಕ್ಷರಸ್ಥರಾಗಿದ್ದಾರೆ.
  • ಅನಕ್ಷರಸ್ಥ ಯುವಜನರಲ್ಲಿ ಮೂರನೇ ಎರಡರಷ್ಟು ಪ್ರಮಾಣ ಹೆಣ್ಣು ಮಕ್ಕಳಿದ್ದಾರೆ.
  • ಐದನೇ ಒಂದು ಭಾಗ ಯುವ ಜನ, ದುರ್ಬಲ/ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.
  • ಶೇಕಡಾ ೫೦% ರಷ್ಟು ಯುವ ಜನತೆ ಎಸ್.ಎಸ್.ಎಲ್.ಸಿಯ ನಂತರ ಶಿಕ್ಷಣವನ್ನು ಮುಂದುವರೆಸುವುದಿಲ್ಲ.
  • ಯುವ ಜನರಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇಕಡ ೧೩.೩ ರಷ್ಟಿದೆ.

ಇಂದಿನ ಯುವ ಸಮೂಹ ಅನೇಕ ಸವಾಲುಗಳು, ವಿವಿಧ ಒತ್ತಡಗಳು, ಅತಿಯಾದ ನಿರೀಕ್ಷೆಗಳು ಹಾಗೂ ಸಾಧನೆಯ ಒತ್ತಡದಲ್ಲಿ ಸಿಲುಕಿದೆ. ಅವರು ಮನೆ, ಶಾಲೆ, ಪರಿಸರ, ಮಾಧ್ಯಮ ಮುಂತಾದ ವೈವಿಧ್ಯಮಯವಾದ ಬಾಹ್ಯ ಹಾಗೂ ಆಂತರಿಕ ಸಾಮಾಜಿಕ, ಮನೋಸಾಮಾಜಿಕ, ವರ್ತನೆ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಯುವ ಜನರಲ್ಲಿ ಸಾಮಾಜಿಕ ಸವಾಲುಗಳು ಅವರು ಸಂಪರ್ಕ ಹೊಂದಿರುವ ಸಮಾಜ ವೈವಿಧ್ಯತೆಗಳಾದ ಕುಟುಂಬ, ಸಮವಯಸ್ಕರು, ಶಿಕ್ಷಕರು ಹಾಗೂ ಉದ್ಯೋಗದಾತರು ಇವೆಲ್ಲ ಸ್ಥರಗಳಲ್ಲಿ ಹಾಸುಹೊಕ್ಕಾಗಿವೆ. ಇದರಿಂದಾಗಿ ಅವರು ಸಂತೋಷದಾಯಕ ಹಾಗೂ ಉಪಯುಕ್ತ ಜೀವನ ನಡೆಸುವಲ್ಲಿ ತುಂಬಾ ಪ್ರಭಾವವನ್ನು ಬೀರುತ್ತವೆ. ಗೌರವಯುತ ಹಾಗೂ ಉಪಯುಕ್ತ ಜೀವನ ನಡೆಸಲು ಕುಟುಂಬ ಮತ್ತು ಸಂಬಂಧಿಕರು, ಗೆಳೆಯರು, ಅಧ್ಯಾಪಕರು, ನೌಕರರು ಮುಂತಾದವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದರೊಂದಿಗೆ, ಕುಟುಂಬ, ಸಮಾಜ ಹಾಗೂ ಸಂಸ್ಥೆಗಳಲ್ಲಿ ಹೊಂದಿಕೊಂಡು ಬಾಳುವಂತಹ ಸಾಮಾಜಿಕ ಸವಾಲುಗಳಿವೆ.
ಯುವಸ್ಪಂದನ ಕಾರ್ಯಕ್ರಮವು ಯುವ ಜನರನ್ನು ಎಲ್ಲಾ ಸ್ಥರಗಳಲ್ಲಿ ಸಬಲರನ್ನಾಗಿಸಲು ಹಾಗೂ ಅವರು ಸುಸ್ಥಿರ ಜೀವನ ನಡೆಸಲು ಸಹಾಯಮಾಡುತ್ತದೆ.

ಗುರಿ

ಕರ್ನಾಟಕದಲ್ಲಿ ಸಬಲೀಕರಣ ಮಾದರಿಯನ್ನು ಉಪಯೋಗಿಸಿಕೊಂಡು ಯುವ ಜನತೆಗಾಗಿ ಜಿಲ್ಲಾ ಯುವ ಸಬಲೀಕರಣ ಕೇಂದ್ರಗಳಲ್ಲಿ ಜಿಲ್ಲಾ ಮಾರ್ಗದರ್ಶನ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಯುವಜನರ, ವರ್ತನಾ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆಗಳನ್ನು ಅನುಷ್ಠಾನಕ್ಕೆ ತರುವುದು.

ಉದ್ದೇಶಗಳು

೧. ಕರ್ನಾಟಕ ರಾಜ್ಯದಾದ್ಯಂತ ಯುವ ಜನಾಂಗದ ವರ್ತನೆಗಳಿಗೆ ಸಂಬಂಧಿಸಿದ , ಮಾನಸಿಕ, ದೈಹಿಕ, ಭಾವನಾತ್ಮಕ, ಪ್ರಾಕೃತಿಕ, ಶೈಕ್ಷಣಿಕ, ವ್ಯಕ್ತಿತ್ವ ಬೆಳವಣಿಗೆ ಮತ್ತು ಕೌಟುಂಬಿಕ ಸಂಬಂಧ ಕುರಿತಾದ ಮತ್ತು ಅವರ ಕುಟುಂಬಗಳ ಸಮಸ್ಯೆಗಳ ಮಾರ್ಗದರ್ಶನಕ್ಕಾಗಿ ತರಬೇತಿ ಪಠ್ಯಗಳನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವುದು.
೨. ಕರ್ನಾಟಕದಲ್ಲಿ ವರ್ತನಾ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆಗಳನ್ನು ಒದಗಿಸುವ ೧೫೦ ಯುವ ಪರಿವರ್ತಕರನ್ನು  ತರಬೇತಿಗೊಳಿಸುವುದು
೩. ಕರ್ನಾಟಕದ ಯುವ ಜನತೆಯ ವರ್ತನಾ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆಗಳನ್ನು ಒದಗಿಸುವ ಯುವ ಸ್ಪಂದನ ಕೇಂದ್ರಗಳನ್ನು ಸ್ಥಾಪಿಸಿ ಮಾರ್ಗದರ್ಶನ ಮತ್ತು ಬೆಂಬಲ ಸೇವೆಗಳನ್ನು ಒದಗಿಸುವುದು
೪. ಕರ್ನಾಟಕ ರಾಜ್ಯದಲ್ಲಿ ಈ ಸೇವೆಗಳು ಗಣನೀಯ ಪ್ರಮಾಣದಲ್ಲಿ ಎಲ್ಲಾ ಯುವ ಜನಾಂಗಕ್ಕೆ ತಲುಪುವಂತೆ ಮಾಡುವುದು

 ಯುವಕರ ಪ್ರಮುಖ ಸಮಸ್ಯೆಗಳು

೧. ಶಿಕ್ಷಣ ಮತ್ತು ವೃತ್ತಿ ವಿಷಯಗಳು
೨. ಆರೋಗ್ಯ ಮತ್ತು ಜೀವನಶೈಲಿ
೩. ಸಂಬಂಧ ಗಳು
೪. ವ್ಯಕ್ತಿತ್ವ ಬೆಳವಣಿಗೆ
೫. ಲಿಂಗ ಮತ್ತು ಲೈಂಗಿಕತೆ
೬. ಸುರಕ್ಷತೆ

ಮೇಲಿನ ಯಾವುದೇ ಸಮಸ್ಯೆಗಳಿಗೆ ಯುವಜನರು ಉಚಿತ ಸೇವೆಗಳನ್ನು ಯುವ ಸ್ಪಂದನ ಕೇಂದ್ರದಲ್ಲಿ ಪಡೆಯಬಹುದು.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ, ನಮಗೆ ಬರೆಯಿರಿ