ನನ್ನ ಹೆಸರು ರಂಗಸ್ವಾಮಿ, ವಯಸ್ಸು ೫೦ ಕೂಲಿ ಕೆಲಸ ಮಾಡಿಕೊಂಡಿದ್ದೇನೆ. ನನ್ನ ಕಿರಿಯ ಮಗನಿಗೆ ೩ ವರ್ಷವಾದ ನಂತರ ಕಿವಿ ಕೇಳಿಸದೇ ಇರುವ ಸಮಸ್ಯೆ ಕಾಣಿಸಿಕೊಂಡಿತ್ತು. ನಾವು ಅವನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು ಅಲ್ಲಿ ಅವನಿಗೆ ಶ್ರವಣ ಯಂತ್ರವನ್ನು ನೀಡಿದ್ದರು. ಅದು ಕೇವಲ ೨ ವರ್ಷದ ನಂತರ ಹಾಳಾಯಿತು. ನಂತರ ಅದನ್ನು ಖರೀದಿಸಲು ನಮ್ಮಲ್ಲಿ ಹಣವಿರಲಿಲ್ಲ. ಇದರಿಂದ ನನಗೆ ಅಸಹಾಯಕತೆ ಕಾಡುತಿತ್ತು.
ಹೀಗಿರುವಾಗ, ನನ್ನ ಮಗನ ಶಾಲೆಯಲ್ಲಿ ನಡೆದ ಯುವ ಸ್ಪಂದನದ ಅರಿವು ಕಾರ್ಯಕ್ರಮದ ಮಾಹಿತಿಯನ್ನು ಹಿರಿಯ ಮಗ ನನಗೆ ತಿಳಿಸಿದ. ಮರುದಿನ ನಾನು ಮಗನೊಂದಿಗೆ ಯುವ ಸ್ಪಂದನದ ಕಛೇರಿಯನ್ನು ಸಂಪರ್ಕಿಸಿದೆವು ಹಾಗೂ ಯುವ ಸಮಾಲೋಚಕರಿಗೆ ನನ್ನ ಮಗನ ಸಮಸ್ಯೆಯ ಬಗ್ಗೆ ತಿಳಿಸಿದೆ. ನಮ್ಮ ಸಮಸ್ಯೆಯನ್ನು ಅರಿತ ಸಮಾಲೋಚಕರು ನಮಗೆ ಸಮಾಧಾನ ಹೇಳಿದರು ಮತ್ತು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ ಎಂದು ಧೈರ್ಯ ತುಂಬಿದರು. ಅಂಗವಿಕಲರ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿದರೆ ನಿಮಗೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಅವರ ಮಾರ್ಗದರ್ಶನದಂತೆ ನಾನು ನನ್ನ ಮಗನನ್ನು ಅಂಗವಿಕಲರ ಕಲ್ಯಾಣ ಇಲಾಖೆಗೆ ಕರೆದುಕೊಂಡು ಹೋದೆ. ಅಲ್ಲಿನ ವೈದ್ಯಕೀಯ ಅಧಿಕಾರಿಗಳು ಅವನನ್ನು ಪರೀಕ್ಷೆ ಮಾಡಿ ೧೫ ದಿನಗಳ ಒಳಗಾಗಿ ಶ್ರವಣಯಂತ್ರವನ್ನು ಒದಗಿಸಿದರು. ಇಷ್ಟು ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಸಿಕ್ಕಿರುವುದು ನಮಗೆ ಸಂತಸ ತಂದಿದೆ. ಅಂಗವಿಕಲರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ನೀಡಿ ನಮ್ಮ ಈ ಸಮಸ್ಯೆಗೆ ಪರಿಹಾರ ಒದಗಿಸಿದ ಯುವ ಸ್ಪಂದನ ಕೇಂದ್ರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.