ನನ್ನ ಹೆಸರು ಮಂಜು. ನನ್ನ ೨೬ ವರ್ಷ ವಯಸ್ಸಿನ ಮಗ ಕೆಲವು ವರ್ಷಗಳ ಹಿಂದೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ. ಆಗ ಊರಿನ ವೈದ್ಯರ ಸಲಹೆಯ ಮೇರೆಗೆ ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿನ ಮಾನಸಿಕ ತಜ್ಞರು ಅವನನ್ನು ಪರೀಕ್ಷೆಗೊಳಪಡಿಸಿ ಆತ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾನೆಂದು ತಿಳಿಸಿ ಚಿಕಿತ್ಸೆ ನೀಡಿದರು. ವೈದ್ಯರು ಸೂಚಿಸಿದ ಹಾಗೆ ಅವನಿಗೆ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು ಮತ್ತು ಮಾತ್ರೆಯನ್ನು ಸರಿಯಾಗಿ ನೀಡುತ್ತಿದ್ದೆವು.
ಹೀಗಾಗಿ ಆತನ ಮಾನಸಿಕ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯಾಗಿ ಖಾಯಿಲೆ ಸಂಬಂಧಿ ಯಾವುದೇ ವರ್ತನಾ ಸಮಸ್ಯೆ ಇರಲಿಲ್ಲ. ಆದರೆ ಅವನು ದಿನನಿತ್ಯದ ಕಾರ್ಯಗಳನ್ನು ಸರಿಯಾಗಿ ಮಾಡುತ್ತಿರಲಿಲ್ಲ. ತುಂಬಾ ಸೋಮಾರಿಯಾಗಿದ್ದ ಹಾಗೂ ಆತನಿಂದ ಕೆಲಸ ಮಾಡಿಸುವುದು ನಮಗೆ ತುಂಬಾ ಪ್ರಯಾಸದ ಕೆಲಸವಾಗಿತ್ತು.
ಆಗ ನಾನು ಆತನನ್ನು ಯುವ ಸ್ಪಂದನ ಕೇಂದ್ರಕ್ಕೆ ಕರೆದುಕೊಂಡು ಬಂದೆ. ಅಲ್ಲಿನ ಮಾರ್ಗದರ್ಶಕರು ಮೊದಲಿಗೆ ನನ್ನ ಬಳಿ ಮಾತನಾಡಿದರು ಮತ್ತು ಸಮಸ್ಯೆಯನ್ನು ಹೇಳಿಕೊಳ್ಳಲು ಅವಕಾಶವನ್ನು ಕಲ್ಪಿಸಿದರು. ಅವರ ಬಳಿ ನನ್ನ ಮಗನ ಸಮಸ್ಯೆಯನ್ನು ಮತ್ತು ಅದರಿಂದಾಗುತ್ತಿರುವ ಪರಿಣಾಮವನ್ನು ಅವರಿಗೆ ವಿವರಿಸಿದೆ. ಅವರು ಆತನ ಖಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು ಮತ್ತು ಮನೆಯ ವಾತಾವರಣದ ಬಗ್ಗೆಯೂ ಮಾಹಿತಿ ಕೇಳಿ ಪಡೆದುಕೊಂಡರು. ನಂತರ ನಾವು ಆತನಿಗೆ ಉತ್ತೇಜನ ನೀಡಬೇಕು, ಮನೆಯ ವಾತಾವರಣದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಹಾಗೂ ಯಾವಾಗಲೂ ಅವನಿಗೆ ಪ್ರೋತ್ಸಾಹ ಮಾಡಬೇಕು ಎಂಬುದನ್ನು ತಿಳಿಸಿದರು. ನಂತರ ಅವರು ನನ್ನ ಮಗನ ಜೊತೆ ಪ್ರತ್ಯೇಕವಾಗಿ ಮಾತನಾಡಿದರು.
ಮಾರ್ಗದರ್ಶಕರು ಹೇಳಿದ ರೀತಿ ಮನೆಯ ವಾತಾವರಣದಲ್ಲಿ ಬದಲಾವಣೆ ತಂದಾಗ ನನ್ನ ಮಗನಲ್ಲೂ ನಿಧಾನವಾಗಿ ಬದಲಾವಣೆ ಆಗುತ್ತಿರುವುದನ್ನು ಗಮನಿಸಿದೆವು. ಜೊತೆಗೆ ಆತನ ಜೊತೆ ಅವರು ನೇರವಾಗಿ ಮತ್ತು ಫೋ಼ನ್ ಮೂಲಕ ಸಂಪರ್ಕದಲ್ಲಿದ್ದು ಕಾಲಕಾಲಕ್ಕೆ ಮಾರ್ಗದರ್ಶನವನ್ನು ನೀಡುವ ಮೂಲಕ ಆತನಿಗೆ ಉತ್ತೇಜನ ನೀಡಿ ಅವನು ಕೆಲಸ ಮಾಡಲು ಮನಸ್ಸಾಗುವಂತೆ ಮಾಡಿದರು. ಚಿಕಿತ್ಸೆಯ ಜೊತೆ ಈ ಎಲ್ಲಾ ಅಂಶಗಳೂ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದು ನನಗೆ ಆಗ ಅರಿವಾಯಿತು. ಆತನಿಗೆ ಚಿಕಿತ್ಸೆಯನ್ನು ಮಾನಸ ಆಸ್ಪತ್ರೆಯಲ್ಲೇ ಮುಂದುವರಿಸಿ ಅನುಸರಣೆ ಮಾಡುವಂತೆ ಸೂಚಿಸಿದರು. ಈಗ ನನ್ನ ಮಗ ಕೆಲವೊಂದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ. ಮೊದಲಿಗಿಂತಲೂ ಈಗ ಆತನಲ್ಲಿ ಬದಲಾವಣೆಗಳು ಕಾಣಿಸುತ್ತಿದೆ. ಇದರಿಂದ ನಮಗೆ ಸಮಾಧಾನವಾಗಿದೆ. ಈ ಸಹಕಾರಕ್ಕೆ ನಾವು ಯುವಸಮಾಲೋಚಕರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.