ನನ್ನ ಹೆಸರು ಅನುಶ್ರೀ, ನನಗೆ ೨೦ ವರ್ಷ, ಹಾಸ್ಟೆಲ್ನಲ್ಲಿ ಉಳಿದುಕೊಂಡು ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನಮ್ಮದು ಬಡ ಕುಟುಂಬ. ಮನೆಯಲ್ಲಿ ಕಷ್ಟವಿದ್ದರೂ ನನ್ನ ತಂದೆಗೆ ನಮ್ಮನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆ. ಹಾಗಾಗಿ ನಮ್ಮನ್ನು ಕಾಲೇಜಿಗೆ ಕಳುಹಿಸುತ್ತಿದ್ದರು. ಈ ನಡುವೆ ನನ್ನ ತಮ್ಮನಿಗೆ ಅನಾರೋಗ್ಯ ಸಮಸ್ಯೆ ಉಂಟಾಯಿತು. ಅವನನ್ನು ನಾವು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದೆವು. ದಿನೇ ದಿನೇ ಅವನ ಆರೋಗ್ಯ ವೃದ್ಧಿಸಿತು ಮತ್ತು ಆಸ್ಪತ್ರೆಯಿಂದ ಬಿಡುಗಡೆಯೂ ಆದ. ಆದರೆ ಅವನ ಚಿಕಿತ್ಸೆಗೆ ಖರ್ಚಾಗಿದ್ದ ಹಣ ತುಂಬಾ ದೊಡ್ಡ ಮೊತ್ತದ್ದಾಗಿತ್ತು. ಅಷ್ಟೊಂದು ಹಣ ನಮ್ಮಲ್ಲಿರಲಿಲ್ಲ. ಹಾಗಾಗಿ, ನನ್ನ ತಂದೆ ದೊಡ್ಡ ಮೊತ್ತದ ಹಣವನ್ನು ಬೆರೆಯವರಿಂದ ಸಾಲ ಪಡೆದು ಆಸ್ಪತ್ರೆಯ ಖರ್ಚನ್ನು ಕಟ್ಟಿದ್ದರು. ಆ ಸಮಯದಲ್ಲಿ ನನಗೆ ಕಾಲೇಜು ಇದ್ದುದ್ದರಿಂದ ನಾನು ಮನೆಗೆ ಹೋಗಿರಲಿಲ್ಲ. ನಂತರ ನನಗೆ ರಜಾದಿನಗಳಲ್ಲಿ ಮನೆಗೆ ಹೋಗಿದ್ದೆ.
ಆ ಸಮಯದಲ್ಲಿ ನನ್ನ ತಂದೆಯು ನನ್ನೊಂದಿಗೆ ಈಗಾಗಲೇ ಆಗಿರುವ ಸಾಲ ಹಾಗೂ ಮುಂದಿನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದರು. ಜೊತೆಗೆ ನಾನು ಅವರ ಕಣ್ಣಿನಲ್ಲಿ ಅಸಹಾಯಕತೆಯನ್ನು ಕಂಡಿದ್ದು ಅದೇ ಮೊದಲು. ಮರಳಿ ನಾನು ಹಾಸ್ಟೆಲ್ಗೆ ಬಂದೆ. ಆದರೆ ಏಕೋ ಒಂದು ರೀತಿಯ ಏನನ್ನೋ ಕಳೆದುಕೊಂಡ ರೀತಿ, ಮನಸ್ಸು ಬಾರ ಅನಿಸುತಿತ್ತು. ಏನು ಮಾಡಲು ಮನಸ್ಸೇ ಬರುತ್ತಿರಲಿಲ್ಲ. ನನ್ನೊಂದಿಗೆ ನನ್ನ ತಂದೆ ಹಂಚಿಕೊಂಡ ಮಾತುಗಳು ನನ್ನ ಮನಸ್ಸಿನಲ್ಲಿ ಪದೇ ಪದೇ ಬರುತ್ತಿದ್ದವು. ವ್ಯಾಸಂಗ ನಿಲ್ಲಿಸಿ ಕೆಲಸಕ್ಕೆ ಸೇರಿ ತಂದೆಗೆ ಸಹಕಾರ ಮಾಡಬೇಕು ಎಂದೆನಿಸಿತ್ತು. ಏನು ಮಾಡಬೇಕೆಂದು ತೋಚದಾಯಿತು.
ಈ ಸಂದರ್ಭದಲ್ಲಿ, ನಮ್ಮ ಕಾಲೇಜಿನಲ್ಲಿ ನಡೆದ ಯುವಸ್ಪಂದನ ಅರಿವು ಕಾರ್ಯಕ್ರಮದ ಮೂಲಕ ಯುವಜನರ ಸಮಸ್ಯೆಗಳಿಗೆ ಮತ್ತು ಗೊಂದಲಗಳಿಗೆ ಯುವಸ್ಪಂದನ ಕೇಂದ್ರದಲ್ಲಿ ಮಾರ್ಗದರ್ಶನ ದೊರೆಯುತ್ತದೆ ಎಂದು ಗೊತ್ತಾಯಿತು. ಹಾಗಾಗಿ ಸ್ನೇಹಿತೆಯ ಜೊತೆಗೂಡಿ ನಾನು ಅಲ್ಲಿಗೆ ಭೇಟಿ ನೀಡಿದೆ. ಮಾರ್ಗದರ್ಶಕರು ನನ್ನನ್ನು ಒಳಗೆ ಕರೆದು ಕೂರಿಸಿ ನನ್ನ ತೊಂದರೆಗಳ ಬಗ್ಗೆ ವಿಚಾರಿಸಿದರು.
ನಾನು ಮನೆಯ ಪರಿಸ್ಥಿತಿಯಿಂದ ನನ್ನಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ತಿಳಿಸಿದೆ. ಅವರ ಜೊತೆ ಎಲ್ಲಾ ವಿಷಯಗಳನ್ನು ಹಂಚಿಕೊಂಡೆ .
ಆಗ ಅವರು ಓದುವುದನ್ನು ಬಿಡದೇ ಲಭ್ಯವಿರುವ ವಿದ್ಯಾರ್ಥಿ ವೇತನ ಹಾಗೂ ಪಾರ್ಟ್ ಟೈಮ್ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಇದರಿಂದ ನನಗೆ ಶಿಕ್ಷಣವನ್ನು ಮುಂದುವರಿಸಿಕೊಂಡು ಕೂಡ ನನ್ನ ತಂದೆಗೆ ಆರ್ಥಿಕ ಸಹಾಯ ಮಾಡಬಹುದು ಎನ್ನುವುದು ತಿಳಿದು ಸಂತೋಷವಾಯಿತು. ಹೀಗೆ ನನ್ನ ಭಾವನೆಗಳನ್ನು ಅರ್ಥೈಸಿಕೊಂಡು ನನಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಯುವ ಸ್ಪಂದನ ನೆರವಾಯಿತು. ಅದಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು.