ನಾನು ಮಾಧುರಿ, ನಮ್ಮದು ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬ. ಊರು ಮಂಗಳೂರು, ನನ್ನ ತಂದೆ ತಾಯಿಯು ಮಂಗಳೂರಿನಲ್ಲಿಯೇ ಇದ್ದಾರೆ. ನಾನು ೬ ತಿಂಗಳ ಹಿಂದೆ ಬೆಂಗಳೂರಿಗೆ ಬಂದೆ. ನಾನು ಇಲ್ಲಿಗೆ ಬರಲು ನನ್ನ ತಂದೆ ತಾಯಿಯು ಒಪ್ಪಿರಲಿಲ್ಲ. ನನ್ನ ವಿದ್ಯಾಭ್ಯಾಸದ ಕಾರಣವನ್ನು ಅವರೊಂದಿಗೆ ತಿಳಿಸಿದಾಗ ಒಪ್ಪಿ ಕಳುಹಿಸಿಕೊಟ್ಟಿದ್ದರು. ಆದರೆ ನನಗೆ ಡ್ಯಾನ್ಸ್ನಲ್ಲಿ ವಿಶೇಷ ಆಸಕ್ತಿ. ಕಾಲೇಜಿಗೆ ಹೋಗದೆ ನಾನು ಡ್ಯಾನ್ಸ್ ಕಲಿಯುತ್ತೇನೆ ಎಂದರೆ ಅವರು ನನ್ನನ್ನು ಹಾಗೆ ಇರಲು ಬಿಡುವುದಿಲ್ಲ ಎಂದು ತಿಳಿದು ಅವರಿಗೆ ಸುಳ್ಳು ಹೇಳಿ ಬಂದಿದ್ದೆ. ಅವರು ನನ್ನ ಮೇಲೆ ತುಂಬಾ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಅವರ ಪ್ರಕಾರ ನಾನು ಇಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೇನೆ. ಆದರೆ ನಾನು ಓದು ಮುಂದುವರಿಸಲು ಕಾಲೇಜಿಗೆ ಸೇರಿಕೊಳ್ಳದೇ, ಡಾನ್ಸ್ ಕ್ಲಾಸ್ಗೆ ಸೇರಿದ್ದೆ.
ಆದರೆ ಡ್ಯಾನ್ಸ್ ಕ್ಲಾಸ್ನ ತರಗತಿಗಳು ದಿನದಲ್ಲಿ ಒಂದೆರಡು ಗಂಟೆಗಳು ಮಾತ್ರವೇ ಇರುತ್ತಿದ್ದವು. ಉಳಿದ ಸಮಯ ಏನು ಮಾಡಬೇಕೆಂದು ಗೊತ್ತಾಗುತ್ತಿರಲ್ಲಿಲ್ಲ. ಇವೆಲ್ಲದರ ನಡುವೆ ಈ ಹಿಂದೆ ನಾನು ಒಬ್ಬನನ್ನು ಪ್ರೀತಿಸಿ ಅವನಿಂದ ಮೋಸ ಹೋಗಿದ್ದೆ. ಇದರಿಂದ ನಾನು ಮಾನಸಿಕವಾಗಿ ಕೂಡ ನೊಂದಿದ್ದೆ. ಹಾಗಾಗಿ, ಇತ್ತೀಚಿಗೆ ನನ್ನ ಮನಸ್ಸು ಯಾಕೋ ಒಂದು ರೀತಿ ಬೇಜಾರಿನಿಂದ ಇರುತ್ತಿರುವುದು ನನ್ನ ಗಮನಕ್ಕೆ ಬರುತ್ತಿತ್ತು. ನನ್ನಲ್ಲಿ ಒಂದು ರೀತಿಯ ಪಾಪ ಪ್ರಜ್ಞೆ ಕಾಡಲು ಆರಂಭಿಸಿತು. ನಾನು ನನ್ನ ತಂದೆ ತಾಯಿಗೆ ಸುಳ್ಳು ಹೇಳಬಾರದಿತ್ತು, ನಾನು ಆ ಸಮಯದಲ್ಲಿ ಅವನನ್ನು ಪ್ರೀತಿಸಬಾರದಿತ್ತು, ನಾನು ಏನೋ ದೊಡ್ಡ ತಪ್ಪು ಮಾಡಿದ್ದೇನೆ. ಎನ್ನುವ ಆಲೋಚನೆಗಳು ನನ್ನನ್ನು ಎಡೆಬಿಡದೆ ಕಾಡಲಾರಂಭಿಸಿದವು. ಹೀಗೆ ನನ್ನ ಮನಸ್ಸಿನಲ್ಲಾಗುತಿದ್ದ ಆತಂಕವು ನನ್ನಿಂದ ಇನ್ನು ಮುಂದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ನಾನು ಅಪ್ರಯೋಜಕಿ ಎಂದು ಅನಿಸುತಿತ್ತು. ಇದು ದಿನೇ ದಿನೇ ಹೆಚ್ಚಾಗಿ ಊಟ ನಿದ್ರೆಯಲ್ಲಿ ತೊಂದರೆಯಾಗತೊಡಗಿತು.
ಈ ಸ್ಥಿತಿಯಲ್ಲಿ ನನ್ನ ಗೆಳೆಯನಿಂದ ಯುವ ಸ್ಪಂದನದ ಪರಿಚಯವಾಗಿ ಭೇಟಿ ಕೊಟ್ಟೆ. ಯಾರೊಂದಿಗೂ ಹಂಚಿಕೊಳ್ಳಲಾಗದಿದ್ದ ನನ್ನ ಮನಸ್ಸಿನಲ್ಲಿದ ಎಲ್ಲಾ ತಳಮಳ ಹಾಗೂ ನೋವನ್ನು ಮುಕ್ತವಾಗಿ ಹಂಚಿಕೊಂಡೆ. ನಂತರ ಎಲ್ಲವನ್ನು ಕೂಲಂಕುಷವಾಗಿ ಆಲಿಸಿ ನನ್ನ ಸ್ಥಿತಿಯ ಸಾರಾಂಶವನ್ನು ನನಗೆ ಹೇಳಿದರು. ಇದರಿಂದ ನಾನು ತುಂಬಾ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ಇನ್ನು ಮುಂದೆ ಯಾವುದೇ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಬೇಕು ಎನ್ನುವುದು ಅರಿವಿಗೆ ಬಂದಿತು. ಜೊತೆಗೆ ಅವರು ನನ್ನ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲವು ಕೋರ್ಸ್ಗಳ ಬಗ್ಗೆ ಹಾಗೂ ಪಾರ್ಟ್ ಟೈಮ್ ಕೆಲಸದ ಬಗ್ಗೆಯೂ ತಿಳಿಸಿದರು. ಈಗ ನನಗೆ ಜೀವನದಲ್ಲಿ ಮುಂದೇನು ಮಾಡಬೇಕು ಎಂಬ ಸ್ಪಷ್ಟತೆ ಸಿಕ್ಕಿದೆ. ಭಯ-ಗೊಂದಲಗಳಿಂದ ತುಂಬಿದ ನನ್ನ ಜೀವನಕ್ಕೆ ಸ್ಪಷ್ಟತೆ ದೊರಕಲು ಯುವ ಸ್ಪಂದನದಿಂದ ದೊರಕಿದ ಸ್ಪಂದನೆ ಮತ್ತು ಮಾರ್ಗದರ್ಶನವೇ ಕಾರಣ. ನಾನು ಯುವ ಸ್ಪಂದನಕ್ಕೆ ಸದಾ ಆಭಾರಿ.