ನಮ್ಮ ಮಗಳಿಗೆ ೧೩ ವರ್ಷ ವಯಸ್ಸು. ಆಕೆಯ ಕೈ ಮತ್ತು ಕಾಲುಗಳಲ್ಲಿ ಅತಿಯಾದ ಬೆವರು ಬರುತ್ತಿತ್ತು. ಏನೂ ಕೆಲಸ ಮಾಡದೆ ಸುಮ್ಮನೆ ಕುಳಿತ್ತಿದ್ದಾಗಲೂ ಸಹ ಆಕೆ ಬೆವರುತ್ತಿದ್ದಳು. ಇದರಿಂದಾಗಿ ಆಕೆಯು ಶಾಲೆಯಲ್ಲಿ ಹಾಗೂ ಮನೆಯ ಹೊರಗಡೆ ತುಂಬಾ ಮುಜುಗರ ಅನುಭವಿಸುತ್ತಿದ್ದಳು. ಇದನ್ನು ನಮ್ಮ ಹತ್ತಿರ ಹೇಳಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದಳು. ಇದಲ್ಲದೇ, ಶಾಲೆಯ ಪ್ರಾಂಶುಪಾಲರು ಹಾಗೂ ನಮ್ಮ ಹಿತೈಶಿಗಳು ಆಕೆಗೆ ಏನೋ ಸಮಸ್ಯೆ ಇದೆ ಎಂದು ತಿಳಿಸಿ ಅವಳನ್ನು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸುತ್ತಿದ್ದರು. ಹಾಗಾಗಿ ನಾವು ಆಕೆಯನ್ನು ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಏನೂ ಪ್ರಯೋಜನವಾಗಲ್ಲಿಲ್ಲ. ಈ ಸಮಸ್ಯೆಯಿಂದ ಆಕೆಗೆ ತುಂಬಾ ಕೀಳರಿಮೆ ಉಂಟಾಗಿತ್ತು ಮತ್ತು ಇತ್ತೀಚೆಗೆ ಮಕ್ಕಳೊಂದಿಗೆ ಆಟವಾಡುವುದು, ಬೇರೆಯವರೊಂದಿಗೆ ಬೆರೆಯುವುದನ್ನು ತುಂಬಾ ಕಡಿಮೆ ಮಾಡಿದ್ದಳು. ಇದರಿಂದ ನಮಗೆ ಏನು ಮಾಡಬೇಕೆಂಬುದು ತೋಚದಂತಾಗಿತ್ತು.
ಈ ನಡುವೆ ಅವಳ ಶಾಲೆಯಲ್ಲಿ ನಡೆದ ಯುವಸ್ಪಂದನ ಅರಿವು ಕಾರ್ಯಕ್ರಮದಿಂದ ಯುವ ಸ್ಪಂದನದ ಬಗ್ಗೆ ತಿಳಿದು ಕೇಂದ್ರಕ್ಕೆ ಭೇಟಿ ನೀಡಿದೆವು. ಅಲ್ಲಿನ ಮಾರ್ಗದರ್ಶಕರು ನಮ್ಮನ್ನು ಕರೆದು ಕೂರಿಸಿ ನಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಆಲಿಸಿದರು. ನಮ್ಮ ಸಮಸ್ಯೆಯನ್ನು ಮನಗಂಡ ಅವರು ನಿಮ್ಮ ಕುಟುಂಬದಲ್ಲಿ ಯಾರಿಗಾದಾರು ಈ ತರ ಸಮಸ್ಯೆ ಇದೆಯೇ ಎಂದು ಕೇಳಿದರು. ಅದುವರೆಗೂ ನಾವು ಈ ವಿಚಾರವನ್ನು ಯೋಚಿಸಿರಲಿಲ್ಲ. ಅವರು ಆ ರೀತಿ ಪ್ರಶ್ನೆ ಮಾಡಿದಾಗ ನಮ್ಮ ಕುಟುಂಬದಲ್ಲಿ ಒಬ್ಬರಿಗೆ (ಆಕೆಯ ಚಿಕ್ಕಮ್ಮನಿಗೆ) ಇದೇ ರೀತಿಯ ಸಮಸ್ಯೆ ಇದ್ದಿದ್ದು ನೆನಪಾಯಿತು. ಅವರಿಗೆ ಈ ಸಮಸ್ಯೆ ಚಿಕ್ಕವಯಸ್ಸಿನಲ್ಲಿಯೇ ಕಾಣಿಸಿಕೊಂಡು ವಯ್ಯಸ್ಸಾದಂತೆ ಅದು ಕಡಿಮೆಯಾಗಿ ಈಗ ಅದು ಸಂಪೂರ್ಣವಾಗಿ ಗುಣಮುಖವಾಗಿತ್ತು.
ಇದರಿಂದ ನಮಗೆ ಸ್ಪಲ್ಪ ಸಮಾಧಾನವಾಯಿತು. ಈ ವಿಷಯವನ್ನು ಮಾರ್ಗದರ್ಶಕರಿಗೆ ತಿಳಿಸಿದೆವು. ಅವರು ನಮಗೆ ಆಕೆಯ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿದರು ಮತ್ತು ಮಗಳಿಗೆ ಧೈರ್ಯ ತುಂಬುವಂತೆ ಮಾರ್ಗದರ್ಶನ ಮಾಡಿದರು. ನಂತರ ಅವರು ನಮ್ಮ ಮಗಳನ್ನು ಕರೆದು ಅವಳೊಂದಿಗೆ ಸುದೀರ್ಘವಾಗಿ ಮಾತನಾಡಿದರು. ಅವಳಲ್ಲಿದ್ದ ಭಯ, ಆತಂಕ ಹಾಗೂ ಮುಜುಗರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವಳೊಂದಿಗೆ ಮಾತನಾಡಿದರು. ಇದರಿಂಗ ಆಕೆಗೆ ಧೈರ್ಯ ಬಂದಿತು. ಹಾಗೂ ಆಕೆಯ ಮನಸ್ಸು ಹಗುರವಾಯಿತು. ಇದಲ್ಲದೇ ನಾವು ಪದೇ ಪದೇ ಅವಳೊಂದಿಗೆ ಈ ವಿಚಾರವಾಗಿ ಮಾತನಾಡಬಾರದು ಹಾಗೂ ಅವಳಿಗೇನಾದರೂ ಮನಸ್ಸಿಗೆ ನೋವಾಗಿದ್ದರೆ ಆ ಸಮಯದಲ್ಲಿ ಅವಳಿಗೆ ಮಾನಸಿಕ ಸ್ಥೈರ್ಯ ತುಂಬಬೇಕು ಎನ್ನುವುದು ತಿಳಿಯಿತು. ಹೀಗೆ ನಮ್ಮ ಸಮಸ್ಯೆಗೆ ಪರಿಹಾರ ನೀಡಿದ ಯುವ ಸ್ಪಂದನಕ್ಕೆ ಧನ್ಯವಾದಗಳು.