ನನ್ನ ಹೆಸರು ಅಶ್ವಿನಿ. ನನಗೆ ೨೩ ವರ್ಷ, ಎಮ್.ಎ ಸ್ನಾತಕೋತ್ತರ ಪದವಿ ಓದುತ್ತಿದ್ದೇನೆ. ಸುಮಾರು ಮೂರು ತಿಂಗಳಿಂದ ವ್ಯಕ್ತಿಯೊಬ್ಬ ನಿರಂತರವಾಗಿ ವಿಭಿನ್ನ ನಂಬರುಗಳಿಂದ ಕರೆಮಾಡಿ ನನ್ನನ್ನು ಪ್ರೀತಿಸುತ್ತಿದ್ದೇನೆ ನೀನು ನನ್ನನ್ನು ಪ್ರೀತಿಸು ಎಂದು ಪೀಡಿಸುತಿದ್ದ. ವಿರೋಧಿಸಿದಾಗ ಅವನು ನನ್ನನ್ನು ಅವ್ಯಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದ. ಇದರಿಂದ ತುಂಬಾ ಭಯವಾಗುತ್ತಿತ್ತು ಜೊತೆಗೆ ಅತಿಯಾದ ಕಿರಿಕಿರಿಯಾಗುತ್ತಿತ್ತು. ನನ್ನ ಫೋ಼ನಿಗೆ ಯಾವುದೇ ಕರೆ ಬಂದರೂ, ಅವನದೇ ಕರೆ ಎಂದು ಅನಿಸಿ ತುಂಬಾ ವಿಚಲಿತಳಾಗುತಿದ್ದೆ. ಇದರಿಂದಾಗಿ ನಾನು ನನ್ನ ದಿನನಿತ್ಯದ ಕೆಲಸಕಾರ್ಯಗಳು ಹಾಗೂ ಊಟ ನಿದ್ರೆಯನ್ನು ಸರಿಯಾಗಿ ಮಾಡಲಾಗದೇ ಎಲ್ಲದರಲ್ಲೂ ಎಡವಟ್ಟು ಮಾಡಿಕೊಳ್ಳುತ್ತಿದ್ದೆ. ಇದಲ್ಲದೇ, ನಾನು ಎಲ್ಲಿಗೆ ಹೋಗುತ್ತೇನೆ, ಏನು ಮಾಡುತ್ತೇನೆ ಎನ್ನುವುದು ಅವನಿಗೆ ತಿಳಿಯುತಿತ್ತು ಹಾಗಾಗಿ ನನಗೆ ಕಾಲೇಜಿಗೆ ಅಥವಾ ಹೊರಗೆ ಹೋಗಲು ತುಂಬಾ ಆತಂಕವಾಗುತಿತ್ತು. ನಮ್ಮದು ತುಂಬಾ ಸಂಪ್ರದಾಯಸ್ಥ ಕುಟುಂಬ ಮನೆಯಲ್ಲಿ ಈ ವಿಷಯ ತಿಳಿಸಿದರೆ ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತದೆ ಜೊತೆಗೆ ನಾನು ಹೊರಹೋಗುವುದನ್ನೂ ನಿಲ್ಲಿಸುತ್ತಾರೆ ಎಂದೆನಿಸುತಿತ್ತು. ಹಾಗಾಗಿ ನಾನು ಈ ವಿಷಯವನ್ನು ಮನೆಯವರಿಗೆ ತಿಳಿಸಲಾಗದೆ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದೆ ಜೊತೆಗೆ ಮಾನಸಿಕ ನೋವನ್ನು ಅನುಭವಿಸುತಿದ್ದೆ. ಏನು ಮಾಡುವುದು ಯಾರಿಂದ ಸಹಕಾರ ಪಡೆಯುವುದು ಎಂದು ತಿಳಿದಿರಲಿಲ್ಲ.
ಈ ಸಂದರ್ಭದಲ್ಲಿ ನಮ್ಮ ಕಾಲೇಜಿನಲ್ಲಿ ಜೀವನ ಕೌಶಲ್ಯ ಅರಿವು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಯುವಪರಿವರ್ತಕರು ಯುವಸ್ಪಂದನ ಕಾರ್ಯಕ್ರಮದ ಬಗ್ಗೆ ವಿವರಿಸಿದರು ಮತ್ತು ಕೇಂದ್ರದಲ್ಲಿ ದೊರೆಯುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ನನ್ನ ಸಮಸ್ಯೆಯನ್ನು ಯುವ ಸ್ಪಂದನ ಕೇಂದ್ರದಲ್ಲಿ ಸಹಕಾರ ದೊರೆಯುತ್ತದೆ ಎಂದು ತಿಳಿಯಿತು. ಜೊತೆಗೆ ಅವರು ಯಾರಿಗೂ ಹೇಳಲಾಗದ ವಿಷಯಗಳನ್ನು ಯುವಸ್ಪಂದನ ಕೇಂದ್ರದಲ್ಲಿ ಯುವಸಮಾಲೋಚಕರ ಬಳಿ ಹಂಚಿಕೊಳ್ಳಬಹುದು ಆಗ ಸಮಸ್ಯೆಯನ್ನು ನಿವಾರಿಸಲು ಮಾರ್ಗದರ್ಶನ ಒದಗಿಸಲಾಗುವುದು ಎಂಬುದು ತಿಳಿಯಿತು. ಯುವ ಸ್ಪಂದನ ಕೇಂದ್ರವಿರುವುದು ನಮ್ಮ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಎಂಬುದು ತಿಳಿಯಿತು ಜೊತೆಗೆ ಫೋ಼ನ್ ಸಂಖ್ಯೆಯು ದೊರೆಯಿತು. ಮರುದಿನವೇ ನಾನು ಯುವ ಸ್ಪಂದನ ಕೇಂದ್ರಕ್ಕೆ ಕರೆ ಮಾಡಿ ಭೇಟಿ ಮಾಡುವುದಾಗಿ ತಿಳಿಸಿದೆ.
ಅಲ್ಲಿ ನನಗೆ ಯುವ ಸಮಾಲೋಚಕಿಯ ಭೇಟಿಯಾಯಿತು. ಅವರು ಹುಡುಗಿಯಾದ್ದರಿಂದ ನಾನು ನನ್ನ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಸಹಕಾರವಾಯಿತು. ಅವರು ನನ್ನ ಸಮಸ್ಯೆಯನ್ನು ವಿವರವಾಗಿ ಹೇಳಲು ತಿಳಿಸಿ, ನಾನು ಹೇಳಿದ ಎಲ್ಲಾ ಮಾಹಿತಿಯನ್ನು ಮನಸ್ಸಿಟ್ಟು ಕೇಳಿಸಿಕೊಂಡರು. ನನ್ನ ಮನಸ್ಸಿನಲ್ಲಿ ಇದ್ದ ಎಲ್ಲಾ ನೋವನ್ನು ಅವರೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟರು. ನನ್ನ ಮನಸ್ಸಿಗೆ ನಿರಾಳ ಎನಿಸಿತು. ನಂತರ ಅವರು ನನ್ನ ಸಮಸ್ಯೆಯಿಂದ ಹೊರಬರಲು ಇರುವ ಎಲ್ಲಾ ದಾರಿಗಳ ಬಗ್ಗೆ ಯೋಚಿಸಿ ಚರ್ಚಿಸಲು ಅನುವು ಮಾಡಿಕೊಟ್ಟರು. ಆಗ ನನಗೆ ಈ ಸಮಸ್ಯೆಯಿಂದ ಹೊರಬರಲು ಹಲವು ದಾರಿಗಳಿವೆ ಎಂಬುದು ತಿಳಿಯಿತು. ಈ ಹಿಂದೆ ಏನಾಗುತ್ತದೆಯೋ ಎಂಬ ಭಯದಲ್ಲಿ ಏನು ಮಾಡಬೇಕೆಂಬುದನ್ನು ಯೋಚಿಸಿಯೇ ಇರಲಿಲ್ಲ ಎನ್ನುವುದು ಅರ್ಥವಾಯಿತು. ನಂತರ ನಾನು ಪ್ರತಿಯೊಂದು ಆಯ್ಕೆಗಳ ಸಾಧಕ ಭಾದಕಗಳನ್ನು ಚರ್ಚಿಸಿದೆ. ಮುಂದೆ ಅವರ ಮಾರ್ಗದರ್ಶನದಂತೆ ನಾನು ಕರೆ ಮಾಡುತ್ತಿದ್ದ ವ್ಯಕ್ತಿಯ ಜೊತೆಗೆ ಚಾಣಾಕ್ಷತನದಿಂದ ಮಾತನಾಡಿ ಅವರು ಯಾರೆಂದು ತಿಳಿದುಕೊಂಡೆ. ಆಗ ಆತ ನನ್ನ ಸಂಬಂಧಿ ಎಂದು ತಿಳಿಯಿತು. ಆತ ಸಂಬಂಧಿಯಾದ್ದರಿಂದ ಇದರ ಬಗ್ಗೆ ನನ್ನ ತಂದೆ-ತಾಯಿಗೆ ವಿವರಿಸಿದೆ. ಅವರು ಈ ಸಮಸ್ಯೆಯನ್ನು ನಿವಾರಿಸಿದರು. ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿದ ಯುವ ಸಮಾಲೋಚಕರಿಗೆ ಮತ್ತು ಯುವ ಸ್ಪಂದನ ತಂಡಕ್ಕೆ ನನ್ನ ಧನ್ಯವಾದಗಳು.