ನನ್ನ ಹೆಸರು ಭಾನು, ಓದುವುದರಲ್ಲಿ ನಾನು ತುಂಬಾ ಮುಂದಿದ್ದೆ. ಟೀಚರ್ ಆಗಬೇಕೆನ್ನುವುದು ನನ್ನ ಕನಸಾಗಿತ್ತು. ಹಿಂದಿನ ವರ್ಷ ನನಗೆ ಬಂದ ತೀವ್ರವಾದ ಜ್ವರ ಆ ಕನಸನ್ನು ನುಚ್ಚುನೂರು ಮಾಡಿತ್ತು. ಜ್ವರದಿಂದ ಗುಣಮುಖವಾದ ನಂತರ ನನಗೆ ಮರೆವಿನ ಸಮಸ್ಯೆ ಹೆಚ್ಚಾಯಿತು. ನಾನು ಎಷ್ಟೇ ಗಮನವಿಟ್ಟು ಓದಿದರೂ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದೆ. ಫಲಿತಾಂಶ ಬಂದಾಗ ನಿಜಕ್ಕೂ ನನಗೆ ತುಂಬಾ ಆಘಾತವಾಗಿತ್ತು. ಕಾರಣ ನಾನು ಎರಡು ವಿಷಯಗಳಲ್ಲಿ ಫೇಲಾಗಿದ್ದೆ. ತುಂಬಾ ಬೇಸರವಾಗಿತ್ತು. ನನ್ನ ಭವಿಷ್ಯದ ಬಗ್ಗೆ ಏನು ತೋಚದಂತಾಗಿತ್ತು. ಮರೆವಿನ ಸಮಸ್ಯೆ ಇರುವುದರಿಂದ ಮುಂದೆ ಓದಲಾಗುವುದಿಲ್ಲ ಎಂದು ಯೋಚಿಸಿ ಓದುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಮುಂದೇನು ಮಾಡಬೇಕೆನ್ನುವುದು ತಿಳಿಯದೆ ಗೊಂದಲದಲ್ಲಿದ್ದೆ.
ನನ್ನ ಸ್ನೇಹಿತೆಯೊಬ್ಬಳು ನನ್ನನ್ನು ಯುವ ಸ್ಪಂದನಕ್ಕೆ ಕರೆದುಕೊಂಡು ಹೋಗಿ ಯುವ ಸಮಾಲೋಚಕರನ್ನು ಪರಿಚಯಿಸಿದಳು. ಅವರ ಬಳಿ ನನ್ನ ಸಮಸ್ಯೆಯನ್ನು ಹೇಳಿಕೊಳ್ಳವಂತೆ ತಿಳಿಸಿದಳು. ನಾನು ಯುವಸಮಾಲೋಚಕರ ಬಳಿ ಮಾತನಾಡಿದೆ ಮತ್ತು ಎಲ್ಲಾ ವಿಷಯವನ್ನು ಅವರೊಂದಿಗೆ ಹಂಚಿಕೊಂಡೆ . ಅವರು ನಾನು ಹೇಳಿದ್ದನ್ನೆಲ್ಲಾ ಕೂಲಂಕುಶವಾಗಿ ಕೇಳಿಸಿಕೊಂಡ ನಂತರ ಹಿಂದೆ ನಾನು ಪಡೆಯುತ್ತಿದ್ದ ಅಂಕಗಳ ಮತ್ತು ಅಭ್ಯಾಸ ಮಾಡುತ್ತಿದ್ದ ವಿಧಾನದ ಮಾಹಿತಿಯನ್ನು ಪಡೆದುಕೊಂಡರು. ನಂತರ ಈ ಸಮಸ್ಯೆಯಿಂದ ಹೇಗೆ ಹೊರಬರುವುದು ಎಂಬುದನ್ನು ಚರ್ಚಿಸಲಾಯಿತು. ಜ್ವರದಿಂದ ಗುಣಮುಖವಾದ ನಂತರ ನನಗೆ ಶಾಲೆಗೆ ಹೋಗಿ ಕಲಿಯುವ ಅವಕಾಶ ಸಿಕ್ಕಿರಲಿಲ್ಲ. ಇದ್ದ ಸಮಯದಲ್ಲಿ ಮನೆಯಲ್ಲಿಯೇ ಓದಿ ಪರೀಕ್ಷೆ ಬರೆದಿದ್ದ ಕಾರಣ ಕಡಿಮೆ ಅಂಕ ಬಂದಿರಬಹುದು ಎಂಬುದನ್ನು ನನಗೆ ಮನವರಿಕೆ ಮಾಡಿದರು. ಯಾವ ಯಾವ ವಿಷಯದಲ್ಲಿ ನೆನಪಿನಶಕ್ತಿ ಕಡಿಮೆಯಾಗಿದೆ ಎಂದು ಕೇಳಿದ ಅವರು ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದೆನಿಸಿದ್ದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ತಿಳಿಸಿದರು. ಮತ್ತು ಕೆಲವು ಮನಶಾಸ್ತಜ್ಞರ ಮಾಹಿತಿಯನ್ನು ಒದಗಿಸಿದರು. ಅವರ ಮಾರ್ಗದರ್ಶನದಂತೆ ನಾನು ಮನಶಾಸ್ತಜ್ಞರನ್ನು ಭೇಟಿ ಮಾಡಿದ್ದೆ. ಅವರು ನನಗೆ ಜ್ಞಾಪಕಶಕ್ತಿ ವೃದ್ಧಿಗೊಳಿಸಲು ಕೆಲವು ತಂತ್ರಗಳನ್ನು ಹೇಳಿಕೊಟ್ಟಿರುತ್ತಾರೆ. ನಾನು ಅದರಂತೆ ಅಭ್ಯಾಸ ಮಾಡುತ್ತಿದ್ದೇನೆ.
ಈಗ ನಾನು ನನ್ನ ಜೀವನದಲ್ಲಿ ಏನೇ ತೊಂದರೆ ಎದುರಾದರೂ ಎದುರಿಸುತ್ತೇನೆ ಎಂಬ ಧೈರ್ಯ ಹೊಂದಿದ್ದೇನೆ. ಯುವಸಮಾಲೋಚಕರ ಮಾರ್ಗದರ್ಶನದಿಂದ ಸಮಸ್ಯೆ ಎದುರಾದಾಗ ಧೃತಿಗೆಡದೆ ಬಗೆಹರಿಸಿಕೊಳ್ಳವ ದಾರಿಯನ್ನು ಹುಡುಕಬೇಕು ಎಂಬುದನ್ನು ತಿಳಿದುಕೊಂಡೆ ಮತ್ತು ಅವರ ಮಾತುಗಳು ಟೀಚರ್ ಆಗಬೇಕೆಂದಿದ್ದ ನನ್ನ ಕನಸನ್ನು ಮತ್ತೆ ಚಿಗುರೊಡೆಯುವಂತೆ ಮಾಡಿದವು. ಸದ್ಯ ಶಿಕ್ಷಣವನ್ನು ಮುಂದುವರೆಸಲು ಇಚ್ಚಿಸಿದ್ದೇನೆ. ನನ್ನ ಜೀವನದಲ್ಲಿ ಮತ್ತೆ ಆಶಾಭಾವನೆ ಮೂಡಿಸಿ ಸೂಕ್ತ ಮಾರ್ಗದರ್ಶನ ಒದಗಿಸಿದ ಯುವಸಮಾಲೋಚಕರಿಗೆ ನಾನು ಚಿರಋಣಿ.