ನನ್ನ ಹೆಸರು ಚಂದನ್. ನನಗೆ ೧೭ ವರ್ಷ ವಯಸ್ಸು. ನಾನು ೧೨ನೇ ತರಗತಿಯಲ್ಲಿ ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದರಿಂದ ಮನೆಯವರು ಇಂಜಿನಿಯರಿಂಗ್ ಓದಲು ಸೇರಿಸಿದ್ದಾರೆ. ನನಗೆ ಇತ್ತೀಚೆಗೆ ಓದುವ ಕಡೆ ಗಮನಹರಿಸಲು ಆಗುತ್ತಿರಲಿಲ್ಲ ಹಾಗೂ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳು ಬರತೊಡಗಿದ್ದವು. ನನ್ನ ತಂದೆ ತಾಯಿಯನ್ನು ಸಾಯಿಸಿ ನಾನೂ ನಾನು ಸಹ ಸಾಯಬೇಕು ಎಂಬ ಆಲೋಚನೆಗಳೂ ಬರುತ್ತಿದ್ದವು. ಈ ರೀತಿಯ ಯೋಚನೆಗಳಿಂದ ಹೊರಬರಲು ತುಂಬಾ ಪ್ರಯತ್ನಿಸುತಿದ್ದೆ ಆದರೆ ನಾನು ಪ್ರಯತ್ನಿಸಿದಷ್ಟು ಅವುಗಳು ಪದೇ-ಪದೇ ಬರತೊಡಗಿದ್ದವು. ಕಾಲೇಜಿಗ ಹೋಗಲು ಮನಸ್ಸಾಗುತ್ತಿರಲಿಲ್ಲ ಜೊತೆಗೆ ಮನೆಯಲ್ಲೂ ಇರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಎಷ್ಟೋ ದಿನಗಳು ಬಸ್ ಸ್ಟಾಂಡ್ ಅಲ್ಲೇ ಕುಳಿತು ಸಂಜೆಯ ನಂತರ ಮನೆಗೆ ಬರುತಿದ್ದೆ. ನಾನು ಮಾಡುತ್ತಿರುವುದು ತಪ್ಪು ಎನ್ನುವುದು ಗೊತ್ತಿತ್ತು. ಆದರೆ ಅದರಿಂದ ಹೊರಬರಲಾಗದೇ ಯೋಚಿಸಿ ಅಳುತಿದ್ದೆ. ನನಗೆ ಏಕೆ ಈ ರೀತಿಯ ಆಲೋಚನೆಗಳು ಬರುತ್ತಿವೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ನನ್ನ ಸ್ಥಿತಿಯನ್ನು ಇತರೆ ಯಾರೊಂದಿಗೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಕಾರಣ ಅವರು ನನ್ನನ್ನು ಏನಂದುಕೊಳ್ಳುತ್ತಾರೆ ಎನ್ನುವ ಆತಂಕ. ಈ ವಿಚಾರವನ್ನು ನನ್ನ ತಂದೆ ತಾಯಿಯ ಜೊತೆಯೂ ಸಹ ಹಂಚಿಕೊಂಡಿರಲಿಲ್ಲ . ಇದೆಲ್ಲವನ್ನು ನನ್ನ ಮನಸ್ಸಿನಲ್ಲೇ ಇಟ್ಟುಕೊಂಡು ತುಂಬಾ ನೋವನ್ನು ಅನುಭವಿಸುತ್ತಿದ್ದೆ. ನಂತರ ಪರೀಕ್ಷೆಯಲ್ಲಿ ನನಗೆ ತುಂಬಾ ಕಡಿಮೆ ಅಂಕಗಳು ಬಂದವು ಆಗ ನನ್ನ ತಂದೆ ತಾಯಿಯನ್ನು ನಮ್ಮ ಪ್ರಾಧ್ಯಾಪಕರು ಕರೆದು ಮಾತನಾಡಿಸಿದರು. ಆಗ ಅವರು ನಮಗೆ ಯುವ ಸ್ಪಂದನ ಕಾರ್ಯಕ್ರಮದ ಪರಿಚಯ ಮಾಡಿಸಿದರು. ಹಾಗಾಗಿ, ನನ್ನ ತಂದೆ ತಾಯಿಯು ನನ್ನನ್ನು ಯುವ ಸ್ಪಂದನ ಕೇಂದ್ರಕ್ಕೆ ಕರೆದುಕೊಂಡು ಹೋದರು.
ಅಲ್ಲಿನ ಸಿಬ್ಬಂದಿ ನಮ್ಮನ್ನು ಮಾತನಾಡಿಸಿದರು ಹಾಗೂ ನಾವು ಹೋಗಿದ್ದ ವಿಷಯವನ್ನು ವಿಚಾರಿಸಿದರು. ಆಗ ನನಗೆ ಅಲ್ಲಿ ಕೂರಲೂ ಅಗುತ್ತಿರಲಿಲ್ಲ. ನಂತರ ಅವರು ನನ್ನ ತಂದೆ ತಾಯಿ ಇಬ್ಬರನ್ನು ಹೊರಗೆ ಕಳುಹಿಸಿ ನನ್ನೊಬ್ಬನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಮೊದಲಿಗೆ ನನಗೆ ಅವರೊಂದಿಗೆ ಮಾತನಾಡಲು ಇರಿಸುಮುರಿಸಾಗುತಿತ್ತು. ನಂತರ ಅವರ ಮಾತು ಮತ್ತು ಹಾವಭಾವ ನನ್ನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಇವರೊಂದಿಗೆ ಹಂಚಿಕೊಳ್ಳಬೇಕು ಎಂಬ ಮನಸ್ಸು ಬರುವಂತೆ ಮಾಡಿತು. ಹಾಗಾಗಿ, ನಾನು ನನಗಾಗುತ್ತಿದ್ದ ಎಲ್ಲಾ ತಳಮಳ, ತೊಂದರೆಗಳನ್ನು ಅವರ ಮುಂದೆ ಹೇಳಿಕೊಂಡೆ.
ನಂತರ ಅವರು ನನಗೆ ಆಗುತ್ತಿರುವ ಸಮಸ್ಯೆಗೆ ಮುಖ್ಯ ಕಾರಣ ನನಗಿರುವ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆ ಇದನ್ನು ನಿವಾರಿಸಿಕೊಳ್ಳಬಹುದು ಎನ್ನುವುದನ್ನು ತಿಳಿಸಿದರು. ಇದರಿಂದ ನನಗೆ ಸ್ವಲ್ಪ ನಿರಾಳವೆನಿಸಿತು. ಜೊತೆಗೆ ನನ್ನ ತಂದೆ ತಾಯಿಯನ್ನು ಒಳಗೆ ಕರೆದು ಅವರಿಗೂ ಸಹ ಅಗತ್ಯವಿದ್ದಷ್ಟು ಅಂಶಗಳನ್ನು ತಿಳಿಸಿ ಮನೋವೈದ್ಯರಲ್ಲಿಗೆ ನನ್ನನ್ನು ಉಲ್ಲೇಖಿಸಿದರು. ಸದ್ಯ ನಾನು ಚಿಕಿತ್ಸೆಯನ್ನು ಪಡೆದುಕೊಳ್ಳುತಿದ್ದೇನೆ. ಇದರಿಂದ ನನಗೆ ಸಮಸ್ಯೆ ಕಡಿಮೆಯಾಗುತ್ತಿದೆ. ಇದಕ್ಕಾಗಿ ನಾನು ಯುವಸ್ಪಂದನಕ್ಕೆ ಕೇಂದ್ರಕ್ಕೆ ಧನ್ಯವಾದಗಳನ್ನು ತಿಳಿಸುತಿದ್ದೇನೆ.