ನನ್ನ ಹೆಸರು ಹರೀಶ್. ವಯಸ್ಸು ೧೭, ಪದವಿ ಪೂರ್ವ ಶಿಕ್ಷಣವನ್ನು ವ್ಯಾಸಂಗ ಮಾಡುತಿದ್ದೇನೆ. ನನ್ನ ತಂದೆ ತಾಯಿಗೆ ನಾವು ಮೂರು ಜನ ಮಕ್ಕಳು ಅವರಲ್ಲಿ ನಾನೇ ದೊಡ್ಡವನು. ನಮ್ಮ ಕುಟುಂಬವು ಆರ್ಥಿಕವಾಗಿ ಸ್ವಲ್ಪ ಪ್ರಮಾಣದಲ್ಲಿ ಸುಸ್ಥಿರವಾಗಿದೆ. ವ್ಯವಸಾಯ ನಮ್ಮ ಮುಖ್ಯ ಕಸುಬು. ನನ್ನ ತಂದೆಗೆ ನಮ್ಮನ್ನೆಲ್ಲಾ ತುಂಬಾ ಚೆನ್ನಾಗಿ ಓದಿಸಬೇಕು ಮತ್ತು ನಮ್ಮನ್ನು ಒಳ್ಳೆಯ ಕೆಲಸಕ್ಕೆ ಸೇರಿಸಬೇಕು ಆ ಮೂಲಕ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾರೆ. ಇಂದಿನ ತನಕ ನಾವು ಕೇಳಿದನ್ನೆಲ್ಲಾ ಇಲ್ಲಾ ಎನ್ನದೆ ಕೊಡಿಸುತಿದ್ದರು. ಜೊತೆಗೆ ಕೆಲವು ಸಂದರ್ಭಗಳಲ್ಲಿ ನಮ್ಮ ವಿದ್ಯಾಭ್ಯಾಸಕ್ಕೆ ಕೊಡಲು ಹಣವಿಲ್ಲದಿದ್ದರೂ, ಹೇಗಾದರೂ ಮಾಡಿ ಹೊಂದಿಸಿಕೊಂಡು ನಮಗೆ ಬೇಕಾದ ಸಮಯದಲ್ಲೇ ನೀಡುತ್ತಿದ್ದರು. ಹೀಗಿರುವಾಗ ನನಗೆ ಕೆಲವು ತಿಂಗಳುಗಳಿಂದ ಮನಸ್ಸಿನಲ್ಲಿ ಏನೋ ಒಂದು ರೀತಿ ಆಗಲು ಪ್ರಾರಂಭವಾಯಿತು. ಸ್ವಲ್ಪ ದಿನಗಳ ನಂತರ ಓದುವ ಸಂದರ್ಭದಲ್ಲಿ ಮನಸ್ಸಿನಲ್ಲಿ, ಬೇರೆ ಬೇರೆ ಆಲೋಚನೆಗಳು ಬರಲಾರಂಭಿಸಿದವು. ಇದರಿಂದ ನನಗೆ ಓದಲು ಸಾಧ್ಯವಾಗುತ್ತಿರಲಿಲ್ಲ.
ದಿನೇ ದಿನೇ ಓದಿನಲ್ಲಿ ಆಸಕ್ತಿ ಕಡಿಮೆಯಾಗುತಿತ್ತು. ಏಕೆ ಹೀಗಾಗುತ್ತಿದೆ, ಏನು ಕಾರಣ ಎಂದು ವಿಧ-ವಿಧವಾಗಿ ಯೋಚಿಸಲು ಆರಂಭಿಸಿದೆ. ಆದರೂ ನನಗೆ ಇದರಿಂದ ಹೊರಬರಲು ಸಾಧ್ಯವಾಗಲಿಲ್ಲ. ದಿನಕಳೆದಂತೆ ನನ್ನ ಮನಸ್ಸನ್ನು ಬೇರೆ-ಬೇರೆ ಆಲೋಚನೆಗಳು ಆಳತೊಡಗಿದವು. ಹೀಗಾಗಿ ನನಗೆ ತುಂಬಾ ಬೇಜಾರಾಗುತ್ತಿತ್ತು ಜೊತೆಗೆ ನನ್ನ ತಂದೆಯ ಆಶಯವನ್ನು ಈಡೇರಿಸಲು ಆಗುವುದಿಲ್ಲವೇನೋ ಎಂಬ ಭಯ ಶುರುವಾಗಿ ಪಾಪಪ್ರಜ್ಞೆ ಕಾಡಲಾರಂಭಿಸಿತು. ನಮ್ಮ ಶಾಲೆಯಲ್ಲಿ ಯುವ ಸ್ಪಂದನ ತಂಡವು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಯುವ ಸ್ಪಂದನ ಕೇಂದ್ರದ ಬಗ್ಗೆ ತಿಳಿದು ಅಲ್ಲಿಗೆ ಭೇಟಿ ನೀಡಿದೆ.
ಯುವಸ್ಪಂದನ ಕೇಂದ್ರದಲ್ಲಿ ಯುವಸಮಾಲೋಚಕರು ನನ್ನನ್ನು ಕರೆದು ಕೂರಿಸಿ ನಾನು ಏತಕ್ಕಾಗಿ ಬಂದಿರುವೆ ಎಂಬುದನ್ನು ಸಮಾಧಾನದಿಂದ ವಿಚಾರಿಸಿದರು. ಆಗ ನನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಅವರೊಂದಿಗೆ ಹೇಳಿಕೊಂಡೆ. ಜೊತೆಗೆ ಅವರು ನನ್ನ ಹವ್ಯಾಸ, ಅಭ್ಯಾಸ, ಮನೆ, ಆಟೋಟ ಒಟ್ಟಾರೆ ನನ್ನ ಜೀವನದ ಅತಿ ಮುಖ್ಯ ಅಂಶಗಳ ಬಗ್ಗೆ ನಮ್ಮ ಮನೆಯ ವಾತಾವರಣದ ಬಗ್ಗೆಯೂ ಮಾಹಿತಿ ಕೇಳಿಕೊಂಡರು ಹಾಗೂ ಅದನ್ನು ಸಾರಾಂಶ ರೂಪದಲ್ಲಿ ನನಗೆ ತಿಳಿಸಿದರು.
ಆಗ ನನಗೆ ತಿಳಿದಿದ್ದೇನೆಂದರೆ ನನ್ನಲ್ಲಿ ಸಮಯ ಪರಿಪಾಲನೆ, ಓದಿನಲ್ಲಿ ಕ್ರಿಯಾಶೀಲತೆ ಇಲ್ಲದಿರುವುದು, ಇನ್ನೊಬ್ಬರನ್ನು ಅನುಕರಣೆ ಮಾಡುವುದು, ಸರಿಯಾದ ರೀತಿಯಲ್ಲಿ ಅಭ್ಯಾಸವನ್ನು ಮಾಡದಿರುವ ಸಂಗತಿಗಳನ್ನು ಅರಿತುಕೊಂಡೆ. ಇದರಿಂದ ನನಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ನಂತರ ಪಾಪಪ್ರಜ್ಞೆ ಕಾಡಲಾರಂಭಿಸಿತ್ತು ಎಂಬುದು ಅರ್ಥವಾಯಿತು. ಇವುಗಳನ್ನು ಅರ್ಥಮಾಡಿಕೊಂಡ ನಂತರ ನಾನು ಅರ್ಥ ಮಾಡಿಕೊಂಡ ಅಂಶಗಳನ್ನು ಪರಿಪಾಲನೆ ಮಾಡಲು ಪ್ರಾರಂಭಿಸಿದೆ. ಮೊದಮೊದಲು ಕಷ್ಟವೆನಿಸಿದರೂ ದಿನಗಳೆದಂತೆ ಅದರಿಂದ ಪ್ರಯೋಜನವಾಗುತ್ತಿರುವುದು ನನ್ನ ಅನುಭವಕ್ಕೆ ಬರತೊಡಗಿತು. ಸದ್ಯ ನನಗೆ ಓದಿನಲ್ಲಿ ಆಸಕ್ತಿ ಬಂದಿದೆ ಹಾಗೂ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡೆ. ಇಷ್ಟು ದಿನ ಅಪ್ಪ-ಅಮ್ಮನಿಗೆ ನಾನು ಪಡೆದ ಅಂಕಗಳನ್ನು ತಿಳಿಸಲು ಹಿಂಜರಿಯುತ್ತಿದ್ದವನು ಇವತ್ತು ಅದನ್ನು ಖುಷಿಯಿಂದ ಹಂಚಿಕೊಳ್ಳುತ್ತಿದೇನೆ. ಇದನ್ನು ನೋಡಿ ನನ್ನ ಪೋಷಕರು ಖುಷಿಯಾಗಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಯುವಸಮಾಲೋಚಕರ ಮಾರ್ಗದರ್ಶನದಿಂದ ಆದುದರಿಂದ ಯುವ ಸ್ಪಂದನ ಕಾರ್ಯಕ್ರಮಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.