ನಾನು ಕರುಣಾ, ೩ ವರ್ಷಗಳ ಹಿಂದೆ ನನ್ನ ಮಗಳನ್ನು ಒಬ್ಬ ವೈದ್ಯನಿಗೆ ಕೊಟ್ಟು ವಿವಾಹ ಮಾಡಿದ್ದೆವು. ಮೊದಮೊದಲು ಅವಳು ತನ್ನ ಗಂಡನ ಕುಟುಂಬದೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಳು . ಒಂದು ವರ್ಷದ ನಂತರ ಆಕೆ ಗರ್ಭವತಿಯಾಗಿ ಒಂದು ಮಗುವನ್ನು ಹೆತ್ತಳು. ಮಗು ಹುಟ್ಟಿದ ಮೇಲೆ ಬಾಣಂತನಕ್ಕೆ ನಮ್ಮ ಮನೆಗೆ ಬಂದಳು. ಈ ಸಮಯದಲ್ಲಿ ಅವಳ ವರ್ತನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾದವು. ಯಾರ ಜೊತೆಗೂ ಬೆರೆಯದೆ ಒಬ್ಬಳೇ ಇರುತ್ತಿದ್ದಳು. ಏನನ್ನೋ ಮನಸ್ಸಿಗೆ ಹಚ್ಚಿಕೊಂಡು ಬೇಜಾರಿನಲ್ಲಿರಬಹುದು, ಸ್ವಲ್ಪ ದಿನಗಳ ನಂತರ ಸರಿಯಾಗುತ್ತಾಳೆ ಎಂದು ನಾವು ಸುಮ್ಮನಾದೆವು. ಆದರೆ ದಿನಕಳೆದಂತೆ, ಅವಳ ಸ್ಥಿತಿ ತುಂಬಾ ಹದಗೆಟ್ಟಿತು. ಆಕೆಯ ಗಂಡನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಜಗಳವಾಡಿ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಒಂದು ಬಾರಿ ವಿಷ ಸೇವಿಸಿ ಆತ್ಮಹತ್ಯೆಗೂ ಪ್ರಯತ್ನಿಸಿದಳು. ಅವಳ ಈ ವರ್ತನೆಗಳಿಂದ ನಾವು ತುಂಬಾ ಗಾಬರಿಗೊಂಡಿದ್ದೆವು. ಏನು ಮಾಡಬೇಕೆಂದು ತಿಳಿದಿರಲಿಲ್ಲ.
ಈ ಸಮಯದಲ್ಲಿ ಯುವ ಸ್ಪಂದನ ಕೇಂದ್ರದ ಬಗ್ಗೆ ತಿಳಿದು ಅಲ್ಲಿಗೆ ಹೋದೆವು. ಅಲ್ಲಿ ಯುವ ಸಮಾಲೋಚಕರು ನಮ್ಮ ಜೊತೆ ಪ್ರತ್ಯೇಕವಾಗಿ ಮಾತನಾಡಿದರು. ನಾನು ನನ್ನ ಮಗಳ ವರ್ತನೆ ಹಾಗೂ ನಡೆದಿರುವ ವಿಚಾರಗಳನ್ನು ಸಂಪೂರ್ಣವಾಗಿ ತಿಳಿಸಿದೆ. ಅವರು ನಾವು ಹೇಳಿದ್ದೆಲ್ಲವನ್ನು ಪೂರ್ಣವಾಗಿ ಆಲಿಸಿದರು. ಜೊತೆಗೆ ಅವಳ ವೈವಾಹಿಕ ಸಂಬಂಧ ಹಾಗೂ ವಿವಾಹ ಪೂರ್ವದಲ್ಲಿ ಅವಳ ವರ್ತನೆ ಇತ್ಯಾದಿ ಅಂಶಗಳು ಮತ್ತು ಈ ಸಮಸ್ಯೆ ಪ್ರಾರಂಭವಾದ ಪ್ರಕ್ರಿಯೆಯ ಬಗೆಗೂ ನಮ್ಮಿಂದ ಕೇಳಿ ತಿಳಿದುಕೊಂಡರು. ಹೀಗೆ ಅವರು ಎಲ್ಲವನ್ನು ತಿಳಿದುಕೊಂಡ ನಂತರ ಅವರು ನನ್ನ ಮಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರು. ನಂತರ ನನ್ನನ್ನು ಕರೆದು ಆಕೆಗೆ ಮಾನಸಿಕ ಚಿಕಿತ್ಸೆಯ ಅವಶ್ಯಕತೆ ಇರುವುದನ್ನು ವಿವರಿಸಿದರು.
ನಮಗೆ ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಲ್ಲಿ ಒಂದು ರೀತಿಯ ಮುಜುಗರ. ಅಲ್ಲಿಗೆ ಹೋದರೆ ಆಕೆಗೆ ಹುಚ್ಚು ಹಿಡಿದಿದೆ ಅಂದುಕೊಳ್ಳುತ್ತಾರೆಂದು ತುಂಬಾ ಭಯವಿತ್ತು. ಇದನ್ನು ಅವರ ಜೊತೆ ಹೇಳಿಕೊಂಡೆ. ಆಗ ಅವರು ಆ ವಿಚಾರವಾಗಿ ನನ್ನ ಜೊತೆ ಚರ್ಚಿಸಿದರು. ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವುದರಿಂದ ಆಗುವ ಸಾಧಕ ಮತ್ತು ಬಾಧಕಗಳನ್ನು ಆಲೋಚಿಸಲು ಅವಕಾಶಮಾಡಿಕೊಟ್ಟರು. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಅತಿ ಮುಖ್ಯ ಎಂಬುದು ತಿಳಿಯಿತು. ನಂತರ ಅವರು ತಿಳಿಸಿದ ಹಲವು ಮಾನಸಿಕ ಚಿಕಿತ್ಸಾ ಕೇಂದ್ರಗಳ ಪೈಕಿ ಒಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಆಕೆಯ ಆರೋಗ್ಯ ಸುಧಾರಿಸಿದೆ ಮತ್ತು ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಜೊತೆಗೆ ಮಗು ಮತ್ತು ಗಂಡನೊಂದಿಗೆ ಸಂತಸದಿಂದ್ದಾಳೆ . ಯುವಮಾಲೋಚಕರು ಸೂಕ್ತ ಸಮಯದಲ್ಲಿ ನಮಗೆ ಮಾರ್ಗದರ್ಶನ ನೀಡಿ, ಉತ್ತಮ ಚಿಕಿತ್ಸಾ ಕೇಂದ್ರದ ಮಾಹಿತಿ ಒದಗಿಸಿದ ಕಾರಣ ಇಂದು ನನ್ನ ಮಗಳ ಜೀವನದಲ್ಲಿ ಒಳ್ಳೆಯ ಪರಿವರ್ತನೆಯಾಗಿದೆ. ಯುವ ಸ್ಪಂದನಕ್ಕೆ ಧನ್ಯವಾದಗಳು.