ನಾನು ರಕ್ಷಿತ್, ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಮುಗಿಸಿರುತ್ತೇನೆ. ನಂತರ ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ಅಲ್ಲಿನ ವ್ಯವಸ್ಥೆ ಮುಖ್ಯವಾಗಿ ಸಿಬ್ಬಂದಿಗಳನ್ನು ನಡೆಸಿಕೊಳ್ಳುವ ರೀತಿ ಮತ್ತು ವೇತನ ನನಗೆ ಅಸಮಾಧಾನ ತರಿಸುತ್ತಿತ್ತು. ಆ ಕೆಲಸದಲ್ಲಿ ನನಗೆ ತೃಪ್ತಿಯಿರಲ್ಲಿಲ್ಲ. ಹೀಗೆ, ಎರಡು ಮೂರು ತಿಂಗಳು ಕೆಲಸ ಮಾಡಿದ ನಂತರ ಕೆಲಸ ಬಿಡುತ್ತಿದ್ದೆ. ಹಾಗಾಗಿ ತುಂಬಾ ಯೋಚನೆ ಮಾಡಿ ಸ್ನೇಹಿತರೊಂದಿಗೆ ಕೂಡಿ ನಾನೇ ಒಂದು ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದೆ. ಕೆಲವು ದಿನಗಳ ಕಾಲ ಜೊತೆಗಿದ್ದ ಸ್ನೇಹಿತರು ಸಂಸ್ಥೆಯಿಂದ ತಮ್ಮ ಜೀವನ ನಡೆಸಲು ಏನೂ ಸಿಗುವುದಿಲ್ಲ ಎನ್ನುವುದು ತಿಳಿದ ಮೇಲೆ ಸಂಸ್ಥೆಯಿಂದ ದೂರವಾಗಿ, ಅವರವರ ಕೆಲಸದಲ್ಲಿ ಮಗ್ನರಾದರು. ನಾನು ಏಕಾಂಗಿಯಾದೆ. ಸಂಸ್ಥೆ ಹೊಸದಾಗಿ ಪ್ರಾರಂಭವಾಗಿದ್ದ ಕಾರಣ ಯಾವುದೇ ಸರ್ಕಾರಿ ಅಥವಾ ಖಾಸಗಿ ಯೋಜನೆಗಳು ನಮ್ಮ ಸಂಸ್ಥೆಗೆ ಸಿಗಲಿಲ್ಲ. ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು. ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಒಂದು ರೀತಿಯ ಅಸ್ಥಿರತೆ, ಗೊಂದಲ, ಭಯ ಮತ್ತು ನನ್ನ ಅಸಮರ್ಥತೆಗೆ ನನ್ನ ಮೇಲೆ ನನಗೇ ಬೇಸರವಾಗತೊಡಗಿತು. ನಮ್ಮ ಸಂಸ್ಥೆಗೆ ನೀಡಬಹುದಾದ ಯಾವುದಾದರೂ ಯೋಜನೆಗಳು ಸಿಗಬಹುದೆಂದು ಸರ್ಕಾರದ ವಿವಿಧ ಇಲಾಖೆಗಳಿಗೆ ಭೇಟಿ ನೀಡುತ್ತಿದ್ದೆ.
ಹೀಗೆ ಒಂದು ದಿನ ನಾನು ಯುವ ಸಬಲೀರಣ ಮತ್ತು ಕ್ರೀಡಾ ಇಲಾಖೆಗೆ ಭೇಟಿ ನೀಡಿದೆ. ಅಲ್ಲಿ ಯುವ ಸ್ಪಂದನ ಕೇಂದ್ರ ಎನ್ನುವ ನಾಮಫಲಕ ನೋಡಿ ಆ ಕೇಂದ್ರದ ಒಳಹೋದೆ. ಅಲ್ಲಿನ ಸಿಬ್ಬಂದಿಯೊಬ್ಬರು ನನ್ನನ್ನು ಬರಮಾಡಿಕೊಂಡು ಕೂರಲು ಸೂಚಿಸಿದರು. ನಾನು ಯುವಸ್ಪಂದನದ ಬಗ್ಗೆ ಅವರ ಬಳಿ ಕೇಳಿದೆ. ಅವರು ನನಗೆ ಯುವಸ್ಪಂದನ ಕಾರ್ಯಕ್ರಮದ ಸೇವೆಗಳ ಬಗ್ಗೆ ತಿಳಿಸಿದರು ಮತ್ತು ಕೆಲವು ಮಾಹಿತಿ ಪುಸ್ತಕಗಳನ್ನು ನೀಡಿದರು ಅದನ್ನೆಲ್ಲಾ ನೋಡಿದ ಮೇಲೆ ನನ್ನ ಜೊತೆಗೆ ಮಾತನಾಡುತ್ತಿರುವುದು ಯುವಸ್ಪಂದನ ಕೇಂದ್ರದಲ್ಲಿ ಯುವಜನರ ವಿವಿಧ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡುವ ಯುವಸಮಾಲೋಚಕರು ಎಂದು ತಿಳಿಯಿತು. ಆಗ ನಾನು ಅಲ್ಲಿಗೆ ಹೋದ ಉದ್ದೇಶವನ್ನು ಅವರಿಗೆ ತಿಳಿಸಿದೆ ಮತ್ತು ನಾನು ನನ್ನ ಕೆಲಸದ ವಿಷಯವಾಗಿ ತುಂಬಾ ಗೊಂದಲದಲ್ಲಿದ್ದೇನೆ ಇದರ ಕುರಿತು ಮಾರ್ಗದರ್ಶನ ನೀಡಬಹುದೇ ಎಂದು ಕೇಳಿದೆ. ಅವರು ನನಗೆ ಸಮಸ್ಯೆಯನ್ನು ಬಿಡಿಸಿ ಹೇಳುವಂತೆ ತಿಳಿಸಿದರು. ನಾನು ನನ್ನ ಪರಿಸ್ಥಿತಿಯನ್ನು ಅವರ ಬಳಿ ಹಂಚಿಕೊಂಡೆ. ಅವರು ಎಲ್ಲವನ್ನೂ ಕೂಲಂಕುಷವಾಗಿ ಕೇಳಿಸಿಕೊಂಡ ಬಳಿಕ ನನ್ನ ಸಮಸ್ಯೆಯನ್ನು ಸಂಕ್ಷಿಪ್ತಗೊಳಿಸಿ ನನಗೆ ತಿಳಿಸಿದರು. ಮುಂದುವರಿದು ಚರ್ಚಿಸಲಾಗಿ ನನ್ನ ಅರಿವಿಗೆ ಬಂದಿದ್ದೇನೆಂದರೆ, ಮೊದಲು ನಾನು ಆರ್ಥಿಕವಾಗಿ ಸದೃಢನಾಗಬೇಕು ನಂತರ ಸಂಸ್ಥೆಯನ್ನು ಲಾಭದ ದೃಷ್ಟಿಯಿಂದ ನೋಡದೇ ಸಾಮಾಜಿಕ ಸೇವೆಯ ದೃಷ್ಟಿಯಿಂದ ಕಟ್ಟಿ ಬೆಳೆಸಬೇಕು ಎಂಬುದು. ಹಾಗಾಗಿ ನಾನು ಸದ್ಯ ಯಾವುದಾದರೂ ಒಂದು ಕೆಲಸವನ್ನು ಹುಡುಕಿ ಸಂಪಾದನೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಂಡೆ.
ಅವರು ನನಗೆ ನನ್ನ ವಿದ್ಯಾರ್ಹತೆಗೆ ಪೂರಕವಾದ ಕೆಲವು ಕೆಲಸದ ಮಾಹಿತಿಯನ್ನು ನೀಡಿದ್ದಾರೆ. ಅವರು ನೀಡಿದ ಮಾಹಿತಿಯನ್ನನುಸರಿಸಿ ಕೆಲವು ಸಂಸ್ಥೆಗಳಲ್ಲಿ ಸಂದರ್ಶನವನ್ನು ನೀಡಿ ಬಂದಿರುತ್ತೇನೆ. ಕೆಲಸ ಸಿಕ್ಕಿದ ಮೇಲೆ ನನ್ನ ಎನ್.ಜಿ. ಓ ಅನ್ನು ಅಭಿವೃಧ್ಧಿಪಡಿಸುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಯಲು ಮತ್ತೆ ಭೇಟಿ ನೀಡಲು ತಿಳಿಸಿರುತ್ತಾರೆ. ಅವರು ನನ್ನ ನಿರ್ಧಾರಗಳನ್ನು ಪ್ರಶ್ನಿಸಿದರು, ನನ್ನ ಗೊಂದಲಗಳನ್ನು ನಿವಾರಿಸಿ ನನ್ನ ಗುರಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸರಿಯಾದ ನಿಟ್ಟಿನಲ್ಲಿ ಮುಂದುವರಿಯಲು ಪ್ರೇರೇಪಿಸಿದರು. ಮುಂದೆ ಕೆಲಸದ ಜೊತೆ ನನ್ನ ಸಂಸ್ಥೆಯನ್ನೂ ಬೆಳೆಸುತ್ತೇನೆ ಎಂಬ ಭರವಸೆ ನನ್ನಲ್ಲಿ ಮೂಡಿದೆ. ಈ ಎಲ್ಲಾ ಸಹಕಾರಕ್ಕೆ ನಾನು ಯುವ ಸ್ಪಂದನಕ್ಕೆ ಚಿರಋಣಿ.