ನನ್ನ ಹೆಸರು ಶಕುಂತಲ. ನಾವು ಬಡತನದಲ್ಲಿದ್ದರೂ ನಾವು ಸಂತೋಷದಿಂದ್ದೇವು . ನಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತಿದ್ದು, ಆಟ ಪಾಠಗಳೆರಡರಲ್ಲೂ ಮುಂದಿದ್ದರು. ಹೀಗಿರುವಾಗ ನಮ್ಮ ಮಗಳು ವಿಭಿನ್ನ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿದಳು. ಸದ್ಯ ಅವಳಿಗೆ ೧೬ ವರ್ಷ ತುಂಬಿದೆ, ಕಳೆದ ೧ ವರ್ಷದಿಂದ ಆಕೆಯ ವರ್ತನಾ ಸಮಸ್ಯೆ ಹೆಚ್ಚಾಗಿ ಆಕೆ ಕೋಣೆಯಿಂದ ಹೊರಗೆ ಬರುತ್ತಿರಲ್ಲಿಲ್ಲ. ಊಟ ತಿಂಡಿಗೂ ಸಹ ಹೊರಬರುತ್ತಿರಲ್ಲಿಲ್ಲ, ಊಟ ಹಾಗೂ ನಿದ್ರೆ ಮಾಡುತ್ತಿರಲಿಲ್ಲ. ಈ ಸನ್ನಿವೇಶದಲ್ಲಿ ನೆರೆಹೊರೆಯವರು ನಮಗೆ ಹಲವು ರೀತಿಯ ಸಲಹೆ ನೀಡುತ್ತಿದ್ದರು. ಆಗ ಹಲವು ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಪೂಜೆ ಪುನಸ್ಕಾರ ಮಾಡಿಸಿದರೂ ಏನೂ ಪ್ರಯೋಜನವಾಗಲಿಲ್ಲ.
ಇದರಿಂದ ನಮ್ಮ ಬಗ್ಗೆ ನೆರೆಹೊರೆಯವರು ಆಡಿಕೊಳ್ಳುತ್ತಿದ್ದರು ಹಾಗೂ ಅವರ ಮಕ್ಕಳನ್ನು ನಮ್ಮ ಮನೆಗೆ ಕಳುಹಿಸುತ್ತಿರಲಿಲ್ಲ. ಇದರಿಂದ ತುಂಬಾ ಬೇಸರವಾಗುತ್ತಿತ್ತು ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಆ ಸಂದರ್ಭದಲ್ಲಿ ಪರಿಚಯದ ವ್ಯಕ್ತಿಯೊಬ್ಬರಿಂದ ಯುವ ಸ್ಪಂದನ ಕೇಂದ್ರದ ಬಗ್ಗೆ ತಿಳಿದು ನಾವು ಕೇಂದ್ರವನ್ನು ಸಂಪರ್ಕಿಸಿದೆವು. ಅವರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ನಮ್ಮೊಂದಿಗೆ ಗೌರವದಿಂದ ನಡೆದುಕೊಂಡರು. ನಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಆಲಿಸಿದ ನಂತರ ನಮಗೆ ಸಾಂತ್ವಾನ ಹೇಳಿ ನಮ್ಮ ಮಗಳಿಗೆ ಇರುವ ಸಮಸ್ಯೆಯು ಒಂದು ರೀತಿಯ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದಕ್ಕೆ ಸೂಕ್ತ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಅರ್ಥಮಾಡಿಸಿದರು.
ಇದರಿಂದ ನಮಗೆ ಆಕೆಯ ಸಮಸ್ಯೆಗೆ ಚಿಕಿತ್ಸೆ ಇದೆ ಎಂಬುದು ಅರ್ಥವಾಯಿತು. ಅಲ್ಲದೇ, ಚಿಕಿತ್ಸೆಯ ಜೊತೆಗೆ ಅವಳೊಂದಿಗೆ ನಾವು ಹೇಗೆ ವರ್ತಿಸಬೇಕು ಎಂಬುದು ಅರಿವಿಗೆ ಬಂತು. ನಂತರ ಅವರು ನಮಗೆ ಹಲವು ಮಾನಸಿಕ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ನೀಡಿದರು. ಅವರು ನೀಡಿದ ಆಯ್ಕೆಗಳಲ್ಲಿ ನಮಗೆ ಸೂಕ್ತವೆನಿಸಿದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿದೆವು. ಸದ್ಯ ಅವಳು ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದಾಳೆ.
ನಮ್ಮ ಮಗಳು ಅವಳಿದ್ದ ಕೋಣೆಯಲ್ಲಿ ಮಾಡಿದ್ದ ಅವಾಂತರವನ್ನು ನೋಡಿದ ಮನೆಯ ಮಾಲೀಕರು ನಮ್ಮನ್ನು ಮನೆ ಖಾಲಿ ಮಾಡಲು ತಿಳಿಸಿದ್ದರು. ಹಾಗಾಗಿ ನಾವು ಮನೆಯನ್ನು ಖಾಲಿ ಮಾಡಬೇಕಿದೆ. ಹೊಸ ಮನೆ ಮಾಡಲು ಹಣವಿಲ್ಲ. ಹಾಗಾಗಿ ಊರಿಗೆ ಹೋಗಲು ಯೋಚಿಸುತ್ತಿದ್ದೇವೆ. ಆದರೆ ಚಿಕಿತ್ಸೆ ಮುಗಿದ ತಕ್ಷಣ ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗಾಗಿ, ಕೆಲವೊಂದು ತಿಂಗಳು ಆಕೆಯನ್ನು ಯಾವುದಾದರೂ ಆಸ್ಪತ್ರೆಯಲ್ಲೇ ಉಚಿತವಾಗಿ ಸೌಲಭ್ಯ ಒದಗಿಸುವ ಕೇಂದ್ರದಲ್ಲಿ ಇರಿಸಬೇಕು ಎಂದು ನಿರ್ಧರಿಸಿದೆವು.
ಆದರೆ ಅದನ್ನು ಹೇಗೆ ಮಾಡುವುದು ಎಂದು ತಿಳಿಯುತ್ತಿರಲಿಲ್ಲ. ಹಾಗಾಗಿ ಪುನಃ ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ಸಹಕಾರ ಯಾಚಿಸಿದೆವು. ಅವರು ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ನಾವು ಮಾನಸಕೇಂದ್ರಕ್ಕೆ (ಸರ್ಕಾರಿ ಸೌಲಭ್ಯ) ಭೇಟಿ ನೀಡಿ ನಮಗೆ ಸಹಕಾರ ನೀಡಲು ಕೇಳಿಕೊಂಡೆವು. ಈ ಎಲ್ಲಾ ಮಾರ್ಗದರ್ಶನ ಹಾಗೂ ಸಹಕಾರಕ್ಕಾಗಿ ನಾವು ಯುವ ಸ್ಪಂದನಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.