ನನ್ನ ಹೆಸರು ಶಂಕರ, ವಯಸ್ಸು ೨೧, ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ಮೊದಲಿನಿಂದಲೂ ನನಗೆ ಹೊಸ ಜನರ ಜೊತೆ ಬೆರೆಯಲು ಕಷ್ಟವಾಗುತ್ತಿತ್ತು ಹಾಗಾಗಿ ನನಗೆ ಯಾರೂ ಸ್ನೇಹಿತರಿರಲಿಲ್ಲ. ಕಾಲೇಜಿನಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ನಾನು ಭಾಗವಹಿಸಿದ್ದೆ ಅಲ್ಲಿ ನನಗೆ ಒಬ್ಬಳು ಹುಡುಗಿಯ ಪರಿಚಯವಾಗಿತ್ತು. ಆಕೆ ನನ್ನನ್ನು ಮಾತನಾಡಿಸುತ್ತಿದ್ದಳು, ನಗಿಸುತ್ತಿದ್ದಳು ಹಾಗಾಗಿ ಆಕೆಯ ಜೊತೆ ಸ್ನೇಹ ಬೆಳೆಯಿತು. ದಿನಕಳೆದಂತೆ ನಾವಿಬ್ಬರೂ ತುಂಬಾ ಆತ್ಮೀಯರಾದವು. ಕಾಲೇಜು ಮುಗಿದ ಮೇಲೂ ಆಕೆ ನನ್ನ ಜೊತೆ ಸಮಯ ಕಳೆಯಲು ಇಚ್ಚಿಸುತ್ತಿದ್ದಳು. ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಹೀಗೆ ಸ್ವಲ್ಪ ಸಮಯ ಎಲ್ಲವೂ ಸರಿಯಾಗಿಯೇ ಇತ್ತು. ನಂತರದ ದಿನಗಳಲ್ಲಿ ನನಗೆ ಆಕೆಯ ಜೊತೆ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ಕಷ್ಟವಾಗುತ್ತಿತ್ತು. ಕಾರಣ ಅವಳು ನನ್ನನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದಳು. ಇದರಿಂದ ನನಗೆ ಒಂದು ರೀತಿಯ ಮುಜುಗರ ಮತ್ತು ಕಿರಿಕಿರಿಯುಂಟಾಗಲು ಶುರುವಾಗಿತ್ತು. ಕಾಲೇಜಿಗೂ ಸರಿಯಾಗಿ ಹೋಗಲು ಆಗದೇ, ಓದಿನಲ್ಲಿ ಇದ್ದ ಆಸಕ್ತಿಯೂ ಕಡಿಮೆಯಾಯಿತು. ನಾನು ಯಾರೊಂದಿಗೂ ಬೆರೆಯದೇ ಇದ್ದ ಕಾರಣ ನನಗೆ ಹೇಳಿಕೊಳ್ಳುವಂತಹ ಸ್ನೇಹಿತರು ಯಾರೂ ಇರಲಿಲ್ಲ. ಹಾಗಾಗಿ ನನಗೆ ಈ ವಿಷಯವನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ತುಂಬಾ ಹಿಂಸೆ ಅನುಭವಿಸುತ್ತಿದ್ದೆ.
ಕಾಲೇಜಿನಲ್ಲಿ ನಡೆದ ಯುವಸ್ಪಂದನ ಕಾರ್ಯಕ್ರಮದಿಂದ ನನ್ನ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿದೆ. ಆದರೆ ನನಗೆ ಯುವ ಸಮಾಲೋಚಕರ ಬಳಿ ಸಮಸ್ಯೆಯನ್ನು ಹೇಳಿಕೊಳ್ಳಲು ಮುಜುಗರವೆನಿಸಿತು. ಅದನ್ನು ತಿಳಿದ ಅವರು ನನಗೆ ದೈರ್ಯ ಹೇಳಿ ಯಾವುದೇ ಸಮಸ್ಯೆಯಾದರೂ ನಾವು ಗೌಪ್ಯವಾಗಿ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದರು. ನಂತರ ನಾನು ಭೇಟಿ ನೀಡಿದ ಉದ್ದೇಶವನ್ನು ತಿಳಿಸಿದೆ. ಅವರು ಎಲ್ಲವನ್ನೂ ಆಲಿಸಿದರು. ನಂತರ ಅವರು ನನಗೆ ಒಬ್ಬರು ಕೌನ್ಸಿಲರ್ ಸಂಪರ್ಕ ದೊರಕಿಸಿಕೊಟ್ಟರು. ನಾನು ಅವರೊಂದಿಗೆ ನನ್ನ ಸಮಸ್ಯೆಯನ್ನು ಮಾತನಾಡಿ ನಿವಾರಿಸಿಕೊಂಡೆ. ಅದಾದ ಮೇಲೆ ನಾನು ಪದವಿ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿದೆ ಉತ್ತೀರ್ಣನಾದೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಗೊಂದಲ ಇದ್ದ ಕಾರಣ ಮತ್ತೆ ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ಮಾರ್ಗದರ್ಶನ ಪಡೆದುಕೊಂಡೆ. ಯುವಸ್ಪಂದನ ಕಾರ್ಯಕ್ರಮದಿಂದ ನನ್ನಂತ ಯುವಕರಿಗೆ ಇನ್ನಷ್ಟು ಸಹಕಾರ ದೊರೆಯಲಿ ಎಂದು ಹಾರೈಸುತ್ತಾ ಸಹಕಾರ ನೀಡಿದ ಯುವಸಮಾಲೋಚಕರಿಗೆ ಧನ್ಯವಾದ ಸಲ್ಲಿಸುತ್ತೇನೆ.