ನನ್ನ ಹೆಸರು ಸೌಜನ್ಯ, ನನ್ನ ಗಂಡನಿಗೆ ಕುಡಿಯುವ ಅಭ್ಯಾಸವಿತ್ತು. ಪ್ರತಿದಿನ ಕುಡಿದು ಬಂದು ಜಗಳವಾಡುತ್ತಿದ್ದರು. ಹಲವು ಬಾರಿ ನನ್ನನ್ನು ಮತ್ತು ಮಕ್ಕಳನ್ನು ಹೊಡೆಯುತ್ತಿದ್ದರು. ಅವರ ದುಡಿಮೆಯನ್ನೆಲ್ಲಾ ಅವರ ಕುಡಿತಕ್ಕೆ ಖರ್ಚು ಮಾಡುತ್ತಿದ್ದರು. ಮನೆಯ ಖರ್ಚಿಗೆ ಏನನ್ನೂ ಕೊಡುತ್ತಿರಲಿಲ್ಲ. ಇದಲ್ಲದೇ ಅವರಲ್ಲಿ ಹಣವಿಲ್ಲದ ದಿನಗಳಲ್ಲಿ ನನ್ನಿಂದ ಬಲವಂತವಾಗಿ ಜಗಳವಾಡಿ ಹಣ ಕಿತ್ತುಕೊಂಡು ಹೋಗಿ ಕುಡಿದು ಬರುತ್ತಿದ್ದರು. ನನ್ನ ತಂದೆ ತಾಯಿ ಬಂದು ಬುದ್ಧಿ ಹೇಳಿದಾಗ, ಮೂರ್ನಾಲ್ಕು ದಿನ ಬಿಡುತ್ತಿದ್ದರು. ನಂತರ ಅದೇ ಚಾಳಿ. ಇದರಿಂದಾಗಿ ನಮ್ಮ ಮನೆಯಲ್ಲಿ ದಿನವೂ ರಾದ್ಧಾಂತ. ಒಂದು ದಿನವೂ ನೆಮ್ಮದಿಯಿಂದ ಇರಲಾಗುತ್ತಿರಲಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ನನ್ನ ತವರು ಮನೆಯವರು ಅಲ್ಪ ಸ್ವಲ್ಪ ಆರ್ಥಿಕ ಸಹಾಯ ಒದಗಿಸುತ್ತಿದ್ದರು. ಹೀಗೆ ನಮ್ಮ ಜೀವನ ತುಂಬಾ ಕಷ್ಟಕರವಾಗಿ ಸಾಗುತಿತ್ತು.
ಈ ಸಂದರ್ಭದಲ್ಲಿ ನಮ್ಮ ಊರಿನಲ್ಲಿ ಯುವ ಸ್ಪಂದನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಅವರು ಯುವ ಸ್ಪಂದನ ಕೇಂದ್ರದಲ್ಲಿ ಕುಡಿತದ ಚಟವಿರುವ ನನ್ನ ಗಂಡನಿಗೆ ಸಹಕಾರ ದೊರೆಯುತ್ತದೆ ಎಂದು ತಿಳಿಸಿದರು ಹಾಗೂ ಸಂಪರ್ಕ ಮಾಹಿತಿಯನ್ನು ನೀಡಿದ್ದರು. ಇದಾದ ಕೆಲವು ದಿನಗಳ ನಂತರ ಅವರಿಂದಲೇ ಫೋ಼ನ್ ಕರೆ ಬಂದಿತು. ಅವರು ಯುವ ಸ್ಪಂದನ ಕೇಂದ್ರಕ್ಕೆ ಆಗಮಿಸಲು ನಮಗೆ ತಿಳಿಸಿದರು. ಇದರಂತೆ ನಾನು ನನ್ನ ಗಂಡನನ್ನು ಕರೆದುಕೊಂಡು ಯುವ ಸ್ಪಂದನ ಕೇಂದ್ರಕ್ಕೆ ಹೋದೆನು. ಯುವಸ್ಪಂದನ ಕೇಂದ್ರದಲ್ಲಿದ್ದ ಮಾರ್ಗದರ್ಶಕರು ಮೊದಲು ನನ್ನನ್ನು ಕರೆದು ಮಾತನಾಡಿಸಿದರು. ನಾನು ನನ್ನ ಅಳಲನ್ನು ಅವರ ಬಳಿ ತೋಡಿಕೊಂಡೆ. ಅವರು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಾಧಾನ ಮಾಡಿದರು. ಆನಂತರ ಅವರು ನನ್ನ ಗಂಡನ ಜೊತೆ ಮಾತನಾಡಿದರು.
ಅವರ ಬಳಿ ಕುಡಿತದ ಚಟವನ್ನು ಬಿಡುವುದರಿಂದ ಏನಾಗುತ್ತದೆ ಎಂದು ಕೇಳಿದರು. ಆಗ ನನ್ನ ಗಂಡ ಅದನ್ನು ಬಿಟ್ಟರೆ ನನಗೆ ಕೆಲಸ ಮಾಡಲಾಗುವುದಿಲ್ಲ, ನಿದ್ರೆ ಬರುವುದಿಲ್ಲ ಹಾಗೆ ಕೈಗಳು ನಡುಗಲು ಆರಂಭಿಸುತ್ತವೆ ಎಂದು ಹೇಳಿದರು. ಆಗ ಅವರು ಇವೆಲ್ಲಾ ಸಮಸ್ಯೆಗಳು ಕಡಿಮೆಯಾಗಲು ನಿಮಗೆ ಸಹಕಾರ ನೀಡಿದರೆ ಕುಡಿತವನ್ನು ಬಿಡಬಹುದೇ ಎಂದು ಮರುಪ್ರಶ್ನಿಸಿದರು. ಆಗ ನನ್ನ ಗಂಡ ನಾನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಲು ಇಚ್ಚಿಸುವುದಿಲ್ಲ ಎಂದು ತಿಳಿಸಿದರು. ಆಗ ಅವರು ನೀವು ದಾಖಲಾಗದೇ ಚಿಕಿತ್ಸೆಯನ್ನು ಮನೆಯಲ್ಲೇ ಇದ್ದು ಪಡೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಆಗ ನನ್ನ ಗಂಡ ಅದಕ್ಕೆ ಒಪ್ಪಿಕೊಂಡರು. ಅದರಂತೆ ಅವರು ದುಶ್ಚಟ ನಿವಾರಣಾ ಘಟಕದ ಮಾಹಿತಿ ನೀಡಿದರು. ಅವರ ಮಾರ್ಗದರ್ಶನದಂತೆ ನನ್ನ ಗಂಡ ವ್ಯಸನ ಮುಕ್ತ ಕೇಂದ್ರದಲ್ಲಿ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದಾರೆ. ಸದ್ಯ ಅವರು ಕುಡಿಯುವುದನ್ನು ನಿಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಯುವ ಸ್ಪಂದನಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.