ನಾನು ಸುಮೇಶ್. ನಮ್ಮದು ತುಂಬಾ ಬಡ ಕುಟುಂಬ. ನನ್ನ ತಾಯಿ ಕೂಲಿ ಕೆಲಸವನ್ನು ಮಾಡಿ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಇತ್ತೀಚಿನ ಕೆಲವು ತಿಂಗಳಿನಿಂದ ನಮ್ಮ ತಾಯಿಯ ಆರೋಗ್ಯ ಹದಗೆಡತೊಡಗಿತ್ತು. ಅವರಿಗೆ ಸುಸ್ತು, ತಲೆಸುತ್ತು ಕಾಣಿಸಿಕೊಳ್ಳುತ್ತಿತ್ತು. ಆದರೆ ಅವರು ಆಸ್ಪತ್ರೆಗೆ ಹೋಗದೇ, ಮನೆಯಲ್ಲಿಯೇ ಗಿಡಮೂಲಿಕೆಗಳ ಕಷಾಯ ತಯಾರಿಸಿ ಕುಡಿಯುತ್ತಿದ್ದರು. ದಿನಕಳೆದಂತೆ, ಅವರ ಅನಾರೋಗ್ಯ ಹೆಚ್ಚಾಗಿ ಏನೂ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾನು ಬಲವಂತವಾಗಿ ಅವರನ್ನು ಊರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅಲ್ಲಿನ ವೈದ್ಯರು ನಮ್ಮ ತಾಯಿಗೆ ರಕ್ತಹೀನತೆಯಿಂದ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಹೇಳಿ, ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಇದರ ಜೊತೆಗೆ ಪೌಷ್ಟಿಕ ಆಹಾರ ತೆಗೆದುಕೊಳ್ಳಲು ಹಾಗೂ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಇದರಿಂದ ನಮಗೆ ದುಡಿಮೆಯೇ ಇಲ್ಲವಾಯಿತು. ಊಟಕ್ಕೂ ಸಹ ಹಣವಿಲ್ಲದ ಪರಿಸ್ಥಿತಿ ಎದುರಾಯಿತು. ಆಗ, ನಾನು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದೊದಗಿತು. ಹಾಗಾಗಿ, ನನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದೆ.
ಹೀಗಿರುವಾಗ ನನ್ನ ಸ್ನೇಹಿತನೊಬ್ಬ ನಮ್ಮ ಶಾಲೆಯಲ್ಲಿ ಆಯೋಜಿಸಿದ್ದ ಯುವಸ್ಪಂದನ ಕಾರ್ಯಕ್ರಮದ ಬಗ್ಗೆ ತಿಳಿಸಿದ. ಅದರಿಂದ ಸಹಾಯವಾಗಬಹುದು ಅಲ್ಲಿಗೆ ಹೋಗು ಎಂದು ಹೇಳಿದ. ಅದರಂತೆ ನಾನು ಯುವಸ್ಪಂದನ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಯುವ ಸಮಾಲೋಚಕರು ನಾನು ಭೇಟಿ ನೀಡಿದ ಉದ್ದೇಶವನ್ನು ಕೇಳಿದರು. ನಾನು ನಮ್ಮ ತಾಯಿಯ ಆರೋಗ್ಯ ಸ್ಥಿತಿ, ಅದರಿಂದ ನಮಗೆ ದುಡಿಮೆ ಇಲ್ಲದಾಗಿ ನಾನು ನನ್ನ ಶಿಕ್ಷಣವನ್ನು ಮೊಟಕುಗೊಳಿಸಿ ಕೆಲಸಕ್ಕೆ ಸೇರಿರುವುದು ಎಲ್ಲವನ್ನು ತಿಳಿಸಿದೆ. ಇದೆಲ್ಲವನ್ನು ಕೇಳಿಸಿಕೊಂಡ ಅವರು ನನಗೆ ಸಮಾಧಾನ ಮಾಡಿದರು ಮತ್ತು ನನ್ನ ನಿರ್ಧಾರಕ್ಕೆ ಅವರು ನನ್ನನ್ನು ಪ್ರಶಂಶಿಸಿದರು. ಇದರಿಂದ ನನಗೆ ಆ ಸಮಯಕ್ಕೆ ನಾನು ತೆಗೆದುಕೊಂಡಿರುವ ನಿರ್ಧಾರ ಸರಿ ಎನ್ನುವುದನ್ನು ತಿಳಿದು ಮನಸ್ಸು ಸಂತೋಷಗೊಂಡಿತು. ಜೊತೆಗೆ ಅವರು ವಿದ್ಯಾಭ್ಯಾಸದ ಮಹತ್ವದ ಕುರಿತು ಆಲೋಚಿಸಲು ನನಗೆ ಅವಕಾಶ ಮಾಡಿಕೊಟ್ಟರು. ಇದಾದ ನಂತರವೂ ನನ್ನ ಮನಸ್ಸು ಓದಲು ಇಷ್ಟಪಡದಿದ್ದಾಗ ಅವರು ನನಗೆ ಕೌಶಲ್ಯಾಭಿವೃದ್ದಿಗೆ ಸಂಬಂಧಿ ಕೋರ್ಸ್ಗಳನ್ನು ತಿಳಿಸಿದರು. ಜೊತೆಗೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಬಳಿಗೆ ಕರೆದುಕೊಂಡು ಹೋದರು ಅವರ ಬಳಿ ನನ್ನ ಆಸಕ್ತಿ ಮತ್ತು ಅವಶ್ಯಕತೆಯ ಬಗ್ಗೆ ವಿವರಿಸಿದರು. ಆಗ ಅವರು ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಯ ಅಡಿಯಲ್ಲಿ ದೊರೆಯುವ ತರಬೇತಿಯ ಬಗ್ಗೆ ತಿಳಿಸಿದರು. ನಾನು ಸದ್ಯ ಅಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇದಕ್ಕಾಗಿ ನಾನು ಯುವ ಸ್ಪಂದನ ಕೇಂದ್ರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ.