ನಾನು ಸುನಿತ, ಚಿಕ್ಕ ವಯಸ್ಸಿನಲ್ಲೇ ನಾನು ನನ್ನ ತಂದೆಯನ್ನು ಕಳೆದುಕೊಂಡೆ, ನನ್ನ ಮತ್ತು ನನ್ನ ಅಣ್ಣನನ್ನು ನೋಡಿಕೊಳ್ಳುವುದು ನಮ್ಮ ತಾಯಿಯೊಬ್ಬರಿಂದಲೇ ಕಷ್ಟಕರವಾಗಿತ್ತು. ಹಾಗಾಗಿ ಅವರು ನನ್ನನ್ನು ನಮ್ಮ ಮಾವನ ಮನೆಯಲ್ಲಿ ಬಿಟ್ಟರು. ಅಂದಿನಿಂದ ನಾನು ನನ್ನ ಮಾವನ ಮನೆಯಲ್ಲಿಯೇ ಉಳಿದುಕೊಂಡು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದೆ. ನನ್ನ ವಿದ್ಯಾಭ್ಯಾಸದಿಂದ ಹಿಡಿದು ನನ್ನ ಎಲ್ಲಾ ಖರ್ಚುವೆಚ್ಚವನ್ನು ಅವರೇ ನೋಡಿಕೊಳ್ಳುತ್ತಿದ್ದರು, ಪ್ರಸ್ತುತ ನಾನು ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ ಮತ್ತು ಸಂಜೆ ವೇಳೆ ಒಂದು ಪಾರ್ಟ್ ಟೈಮ್ ಕೆಲಸಕ್ಕೆ ಹೋಗುತ್ತಿದ್ದೆ. ಕಾರಣ ನನ್ನ ಮಾವನವರು ಅವರು ಮನೆ ನಿಭಾಯಿಸುವುದರ ಜೊತೆಗೆ ನನ್ನ ವಿದ್ಯಾಬ್ಯಾಸದ ಖರ್ಚುವೆಚ್ಚವನ್ನೂ ನೋಡಿಕೊಳ್ಳುತ್ತಿದ್ದರು ಇದರಿಂದ ನನ್ನ ಮಾವನ ಮೇಲೆ ನನಗೆ ತುಂಬಾ ಗೌರವ ಮತ್ತು ಪ್ರೀತಿ. ಹಾಗಾಗಿ ಅವರ ಸ್ಥಿತಿಯನ್ನು ನೋಡಿ ನಾನು ಅವರಿಗೆ ಸ್ವಲ್ಪ ಆರ್ಥಿಕವಾಗಿ ಸಹಾಯ ಮಾಡುವ ಸಲುವಾಗಿ ನಾನು ಕೆಲಸಕ್ಕೆ ಸೇರಿದ್ದೆ. ಇದರ ಉದ್ದೇಶ ನನ್ನ ಸಂಪಾದನೆಯಿಂದ ನನ್ನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿತ್ತು. ಆದರೆ ಇತ್ತೀಚೆಗೆ ನನ್ನ ಮಾವನಿಗೆ ಏನಾಯಿತೋ ಗೊತ್ತಿಲ್ಲ, ನನ್ನ ಜೊತೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ.
ಹಾಗೆ ನನ್ನ ಅತ್ತೆಗೆ ಅವರು ನಾಳೆಯಿಂದ ಅವಳು ಕಾಲೇಜು ಹಾಗೂ ಕೆಲಸಕ್ಕೆ ಹೋಗಬೇಡ ಎಂದು ಹೇಳಿಬಿಡು ಎಂದು ತಿಳಿಸಿದ್ದರು. ಇದನ್ನು ನನ್ನ ಅತ್ತೆ ನನಗೆ ಹೇಳಿದ ತಕ್ಷಣ ನನಗೆ ದಿಕ್ಕು ತೋಚದಂತಾಯಿತು. ಏನು ಮಾಡಬೇಕು ಎಂದು ತಿಳಿಯಲಿಲ್ಲ. ಏಕೆ ನನ್ನ ಮಾವ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿಯದೆ ಮನಸ್ಸಿಗೆ ತುಂಬಾ ನೋವಾಗುತಿತ್ತು. ನಾನು ಚೆನ್ನಾಗಿ ಓದಿ, ಕೆಲಸ ಮಾಡಿ ನನ್ನ ಅಮ್ಮ ಮತ್ತು ಮಾವನಿಗೆ ಗೌರವ ತರಬೇಕು ಎಂಬುದು ನನ್ನ ಆಶಯವಾಗಿತ್ತು. ಆದರೆ ಈ ರೀತಿ ಆಗಿದ್ದು ನನಗೆ ದೊಡ್ಡ ಆಘಾತವೇ ಆಗಿತ್ತು. ಏನು ಮಾಡಬೇಕೆಂದು ತಿಳಿಯದೆ ಅಳುತ್ತಿದ್ದೆ. ಈ ವಿಚಾರವನ್ನು ಅಮ್ಮನ ಬಳಿಯೂ ಹೇಳಿಕೊಂಡಿದ್ದೆ. ಆಗ ಅಮ್ಮ ಮಾವ ಹೇಳಿದ ಹಾಗೆ ಕೇಳು ಎಂದು ನನಗೆ ಬುದ್ದಿವಾದ ಹೇಳಿದರು. ತುಂಬಾ ಆತಂಕವಾಗುತಿತ್ತು.
ಈ ಸಂದರ್ಭದಲ್ಲಿ ನನ್ನ ಕಾಲೇಜಿನಲ್ಲಿ ಯುವಪರಿವರ್ತಕರು ಯುವಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿ ಯುವಸ್ಪಂದನ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಅದರಂತೆ ನಾನು ಸಹಕಾರ ಬೇಕು ಎಂದು ಬರೆದು ತಿಳಿಸಿದ್ದೆ. ಇದಾದ ಎರಡು ದಿನಗಳ ನಂತರ ನನ್ನ ಮೊಬೈಲ್ಗೆ ಯುವ ಸ್ಪಂದನದ ಕರೆ ಬಂತು. ಅವರು ನನ್ನ ಜೊತೆ ಮಾತನಾಡಿ ನನ್ನನ್ನು ಯುವ ಸ್ಪಂದನಕ್ಕೆ ಕರೆದರು. ಮರುದಿನ ಬಿಡುವು ಮಾಡಿಕೊಂಡು ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿದೆ.
ಯುವ ಸಮಾಲೋಚಕರು ನನ್ನೊಂದಿಗೆ ಮಾತನಾಡಿದ ರೀತಿಯಿಂದ ನನಗೆ ಆತ್ಮವಿಶ್ವಾಸ ಮೂಡಿತು ಹಾಗು ನನ್ನೆಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂಬ ಮನಸ್ಸು ಮೂಡಿತು. ಆಗ ನನ್ನ ಸಮಸ್ಯೆಯನ್ನು ಅವರೊಂದಿಗೆ ಮುಕ್ತವಾಗಿ ಹಂಚಿಕೊAಡೆ. ಈ ಚರ್ಚೆಯಲ್ಲಿ ತಿಳಿದುಬಂದಿದ್ದೇನೆಂದರೆ ನನ್ನ ಮಾವ ನನ್ನ ಮೇಲೆ ಅವರಿಗೆ ಬೆಳೆದಿರುವ ಅನುಮಾನದಿಂದ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು. ಹಾಗಾಗಿ, ಈ ಸ್ಥಿತಿಯ ಬಗ್ಗೆ ಅವರೊಂದಿಗೆ ಮಾತನಾಡಿ ಅವರಲ್ಲಿ ನಾನು ನಂಬಿಕೆಯನ್ನು ಮೂಡಿಸುವ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು ಎಂಬುದು ತಿಳಿಯಿತು. ಇದಾದ ನಂತರ ನನ್ನ ಮನಸ್ಸು ತುಂಬಾ ಹಗುರವಾಯಿತು ಹಾಗೂ ಆತ್ಮ ವಿಶ್ವಾಸ ಮೂಡಿತು. ಈ ರೀತಿಯ ಸಹಕಾರವನ್ನು ಒದಗಿಸಿದ ಯುವ ಸ್ಪಂದನಕ್ಕೆ ನನ್ನ ಧನ್ಯವಾದಗಳು.