ನನ್ನ ಹೆಸರು ಮಧುಮತಿ, ದ್ವಿತೀಯ ಪಿ.ಯು.ಸಿ ಓದುತ್ತಿದ್ದೇನೆ. ನನ್ನ ತಂದೆ ಯಾವಾಗಲೂ ಮದ್ಯಪಾನ ಮಾಡುತ್ತಿದ್ದರು, ಮನೆಯಲ್ಲಿ ನಾವು ಸಂತೋಷವೆಂಬುದೇ ಕಂಡಿರಲಿಲ್ಲ ಈ ಕಾರಣದಿಂದ ನನಗೆ ತುಂಬಾ ಬೇಜಾರಾಗುತ್ತಿತ್ತು. ಅವರು ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರಗಳಿಗೆ ಕೋಪಗೊಳ್ಳುತ್ತಿದ್ದರು ಮತ್ತು ನಮ್ಮ ಜೊತೆ ಜಗಳವಾಡುತ್ತಿರು. ಈ ಮಧ್ಯೆ ನನ್ನ ತಂಗಿ ಆಕೆ ಇಷ್ಟಪಟ್ಟವನನ್ನು ಮದುವೆಯಾಗಿ ನಮ್ಮಿಂದ ದೂರವಾಗಿದ್ದಳು. ಇದಾದ ನಂತರ ನಮ್ಮ ತಂದೆಯ ಕುಡಿತದ ಸಮಸ್ಯೆ ಇನ್ನೂ ಹೆಚ್ಚಾಗಿತ್ತು ಮತ್ತು ತುಂಬಾ ಕೋಪ ಮಾಡಿಕೊಳ್ಳಲು ಪ್ರಾರಂಭಿಸಿದ್ದರು. ನಾನು ಮತ್ತು ನನ್ನ ತಾಯಿಯೇ ಆಕೆ ಮದುವೆಯಾಗಲು ಕಾರಣಕರ್ತರು ಎಂದು ದೂಷಿಸುತ್ತಿದ್ದರು. ಕುಡಿದು ಬಂದು ಅಮ್ಮನಿಗೆ, ನನಗೆ ಹೊಡೆಯುದನ್ನು ಮತ್ತು ಬಯ್ಯುವುದನ್ನು ಹೆಚ್ಚು ಮಾಡಿದರು. ಅಲ್ಲದೇ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಅವರು ಓಡಿ ಹೋಗುತ್ತಾರೆ ಎಂದು ಹೇಳಿ ನನಗೆ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಲು ಸೂಚಿಸಿದ್ದರು. ಈ ಎಲ್ಲಾ ಸಮಸ್ಯೆಯಿಂದ ಬೇಸತ್ತ ನಾನು ಇವೆಲ್ಲದರಿಂದ ಮುಕ್ತಿ ಪಡೆಯಬೇಕೆಂದರೆ ಜೀವ ಕಳೆದುಕೊಳ್ಳುವುದೊಂದೇ ದಾರಿ ಎಂದು ಯೋಚಿಸತೊಡಗಿದ್ದೆ.
ಈ ಸಮಯದಲ್ಲಿ ಕಾಲೇಜಿನಲ್ಲಿ ನಡೆದ ಯುವ ಸ್ಪಂದನ ಕಾರ್ಯಕ್ರಮದಿಂದ ಮಾಹಿತಿ ಪಡೆದು ನಾನು ಯುವ ಸ್ಪಂದನ ಕೇಂದ್ರಕ್ಕೆ ಸಹಾಯಕ್ಕಾಗಿ ಹೋದೆ. ಅಲ್ಲಿ ಯುವಪರಿವರ್ತಕರು ನನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಅನುವು ಮಾಡಿಕೊಟ್ಟರು. ಅವರ ಬಳಿ ನಾನು ನನ್ನ ಸಮಸ್ಯೆಯನ್ನು ವಿವರಿಸಿದೆನು. ನಂತರ ಅವರು ನನಗೆ ಸಮಾಧಾನ ಹೇಳಿದರು ಮತ್ತು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಮನಸ್ಸಿಗೆ ಧೈರ್ಯ ತುಂಬಿದರು. ದೇಶದಲ್ಲಿ ಕುಡಿತದ ಸಮಸ್ಯೆಯಿಂದ ಹಲವಾರು ಕುಟುಂಬಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಅರಿವು ಮೂಡಿಸಿದರು. ಅವರ ಮಾತಿನಿಂದ ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿರುವವಳು ನಾನೊಬ್ಬಳೇ ಅಲ್ಲ ಬದಲಾಗಿ ಇನ್ನೂ ಹಲವರು ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಯಿತು. ಇವೆಲ್ಲವನ್ನು ಎದುರಿಸಲು ಧೈರ್ಯ ತುಂಬಿದರು. ಯುವ ಪರಿವರ್ತಕರು ನನ್ನ ತಂದೆ ತಾಯಿಯನ್ನು ಕರೆಸಿ ಆಪ್ತಸಮಾಲೋಚನೆ ಮಾಡಿದರು. ಅವರಿಗೆ ಕುಡಿತ ಚಟವಾಗಿ ಪರಿವರ್ತನೆಯಾದಾಗ ಅವರಿಗೆ ಅರಿವಿಲ್ಲದಂತೆ ನಾವು ಅದರ ದಾಸರಾಗಿಬಿಡುತ್ತೇವೆ. ಅದರಿಂದ ನಮಗೆ ಕುಡಿತವೊಂದೇ ಮುಖ್ಯವಾಗಿ ಬೇರೆಲ್ಲವೂ ನಗಣ್ಯವಾಗಿವಾಗಿಬಿಡುತ್ತದೆ ಎಂಬ ಸತ್ಯವನ್ನು ತಿಳಿಸಿದರು. ನೀವು ನಿಮ್ಮ ಕುಟುಂಬವು ಸದ್ಯ ಇದೇ ಪರಿಸ್ಥಿತಿಯಲ್ಲಿದೆ ಎಂದು ನನ್ನ ತಂದೆಗೆ ಮನವರಿಕೆ ಮಾಡಿದರು.
ಮನೆಯಲ್ಲಿ ಸಂತೋಷ ನೆಮ್ಮದಿ ಇಲ್ಲದ ಕಾರಣ ಮನೆಯವರ ಮನಸ್ಸು ಹೇಗಿದೆ ಎಂಬುದನ್ನು ತಿಳಿದುಕೊಂಡಿರುವಿರಾ ಎಂಬ ಪ್ರಶ್ನೆಯನ್ನು ಕೇಳಿದರು. ಯುವಸಮಾಲೋಚಕರು ಹೀಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾನು ನನ್ನ ತಂದೆಯ ಮುಖದಲ್ಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿದ್ದೆ. ಆದರೆ ಅವರು ಏನೂ ಮಾತನಾಡಲಿಲ್ಲ. ಮುಂದೆ ಮದ್ಯವ್ಯಸನದಿಂದ ಮನೆಯಲ್ಲಿ ಏನೇನು ಲಾಭವಾಗುತ್ತಿದೆ ಮತ್ತು ಸಮಸ್ಯೆಗಳಾಗುತ್ತದೆ ಎಂಬುದನ್ನು ವಿವರಿಸಲು ತಿಳಿಸಿದರು. ಆಗ ನನ್ನ ತಂದೆಗೆ ಲಾಭಕ್ಕಿಂತ ಹೆಚ್ಚು ಸಮಸ್ಯೆಯಾಗುತ್ತಿರುವುದು ಅರಿವಿಗೆ ಬಂತು. ಜೊತೆಗೆ ಮದ್ಯವ್ಯಸನದಿಂದ ಆರೋಗ್ಯಕ್ಕೆ ಯಾವ ರೀತಿ ಹಾನಿಯಾಗುತ್ತದೆ ಎಂದು ವಿವರಿಸಿದರು. ನಂತರ ತಂದೆಯು ಎಲ್ಲವನ್ನು ಅರ್ಥಮಾಡಿಕೊಂಡು ಚಿಕಿತ್ಸೆ ತೆಗೆದುಕೊಳ್ಳಲು ಒಪ್ಪಿದರು. ಅದರಂತೆ ಅವರು ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ನಮ್ಮನ್ನು ಹಿಂದಿನ ಹಾಗೆ ಹಿಂಸಿಸುತ್ತಿಲ್ಲ ಹಾಗೂ ನಾವು ಕೂಡ ಆ ಸನ್ನಿವೇಶಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕಲೆಯನ್ನು ಕಲಿತುಕೊಂಡಿದ್ದೇವೆ. ಈ ರೀತಿಯ ಸಮಸ್ಯೆ ಇರುವ ಎಲ್ಲಾ ವ್ಯಕ್ತಿಗಳು ಯುವ ಸ್ಪಂದನದಿಂದ ಸಹಕಾರ ಪಡೆದುಕೊಳ್ಳಬಹುದು. ಸಹಕಾರಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.