ನನ್ನ ಹೆಸರು ಜಸೀನಾ. ನಾನು ನನ್ನ ಮೊಮ್ಮಗನ ಬಗ್ಗೆ ತುಂಬಾ ಚಿಂತೆಗೊಳಗಾಗಿದ್ದೆ. ಶಿಕ್ಷಕರು ಆತನು ಗಮನ ಮತ್ತು ಏಕಾಗ್ರತೆ ಕಡಿಮೆ ಇರುವ ಮಗು ಎಂದು ಗುರುತಿಸಿದ್ದರು. ಹೀಗಾಗಿ ಅವನ ತಂದೆ-ತಾಯಿ ಇಬ್ಬರೂ ಅವನನ್ನು ಓದು, ಓದು ಎಂದು ತುಂಬಾ ಒತ್ತಡ ಹೇರುತ್ತಿದ್ದರು. ಇವೆಲ್ಲಾ ಕಾರಣಗಳಿಂದ ನನ್ನ ಮೊಮ್ಮಗ ತುಂಬಾ ತೊಂದರೆಗೊಳಗಾಗಿದ್ದ. ಅವನ ತಂದೆ ತಾಯಿ ಇಬ್ಬರೂ ಬೆಳಗ್ಗೆ ಕೆಲಸಕ್ಕೆಂದು ಹೋದರೆ ಬರುವುದು ಸಂಜೆಯಾಗುತ್ತಿತ್ತು. ಅವನು ಶಾಲೆಯಿಂದ ಬಂದ ಮೇಲೆ ನಾನು ಅವನ ಜೊತೆ ಸಮಯ ಕಳೆಯುತ್ತಿದ್ದೆ. ನನಗೆ ಗೊತ್ತಿತ್ತು, ಅವನಿಗೆ ಗಣಿತವನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ ಚೆನ್ನಾಗಿ ಓದುತ್ತಿದ್ದ ಹಾಗೂ ಆತ ತುಂಬಾ ಚೂಟಿಯ ಹುಡುಗ. ತಂದೆ- ತಾಯಿ, ಶಿಕ್ಷಕರ ಒತ್ತಡದಿಂದಾಗಿ ಆತನ ಹುಡುಗಾಟ ಮಾಯವಾಗಿತ್ತು. ಯಾವಾಗಲೂ ಮಂಕಾಗಿರುತ್ತಿದ್ದ. ನನ್ನಿಂದ ಅವನಿಗೆ ಯಾವ ಸಹಾಯವೂ ಮಾಡಲು ಆಗುತ್ತಿರಲಿಲ್ಲ.
ಈ ಸ್ಥಿತಿಯಲ್ಲಿ ನಾನು ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಿದೆ. ಅವರು ನನಗೆ ನನ್ನ ಮೊಮ್ಮಗನನ್ನು ಯುವಸ್ಪಂದನ ಕೇಂದ್ರಕ್ಕೆ ಕರೆತರಲು ತಿಳಿಸಿದರು. ನಾವಿಬ್ಬರೂ ಅಲ್ಲಿಗೆ ತೆರಳಿದೆವು. ಅವರಿಗೆ ನಾನು ಎಲ್ಲಾ ವಿಷಯವನ್ನು ವಿವರಿಸಿದೆ. ನಂತರ ಅವರು ನನ್ನ ಮೊಮ್ಮಗನ ಕಲಿಕೆಯ ಬಗ್ಗೆ ವಿಚಾರಿಸಿದರು. ಆಗ ಅವನಿಗೆ ಎಲ್ಲಾ ವಿಷಯಗಳನ್ನು ಇಂಗ್ಲೀಷಿನಲ್ಲಿ ಓದಿ ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ ಎಂಬುದು ತಿಳಿಯಿತು. ಜೊತೆಗೆ ಅವನನ್ನು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ವರ್ಗಾಯಿಸಿರುವುದು ಕಾರಣ ಎಂಬುದು ತಿಳಿಯಿತು.
ನಂತರ ಯುವ ಪರಿವರ್ತಕರು ಯಾವುದೇ ವ್ಯಕ್ತಿಗೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದರೂ ಸಮಯ ಹಿಡಿಯುತ್ತದೆ, ಹಾಗೇ ಈ ಮಗುವಿಗೂ ಹೊಸ ಕಲಿಕಾ ವಿಧಾನಕ್ಕೆ ಹೊಂದಾಣಿಕೆಯಾಗುವುದರಲ್ಲಿ ಸ್ವಲ್ಪ ಸಮಯ ಮತ್ತು ಪ್ರಯತ್ನದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿಸಿದರು. ಜೊತೆಗೆ ಆತನಿಗೆ ಒಂದು ಒಳ್ಳೆಯ ಕೋಚಿಂಗ್ ಸೆಂಟರ್ನ್ನು ಹುಡುಕಿ ಉಲ್ಲೇಖಿಸಿದರು. ಮನೆಯಲ್ಲಿ ಯಾವರೀತಿಯ ಸಹಕಾರದ ಅಗತ್ಯವಿದೆ ಎಂದು ನನಗೆ ಮನವರಿಕೆ ಮಾಡಿಸಿದರು. ಮನೆಗೆ ಹೋಗಿ ಅವನ ತಂದೆ ತಾಯಿ ಜೊತೆ ಮಾರ್ಗದರ್ಶಕರು ಹೇಳಿದ ವಿಷಯಗಳನ್ನು ಚರ್ಚಿಸಿದೆ. ಅವನು ಈಗ ಮಾರ್ಗದರ್ಶಕರು ಉಲ್ಲೇಖಿಸಿದ ಕೋಚಿಂಗ್ ಸೆಂಟರ್ನಲ್ಲಿ ಶಾಲಾ ಅವಧಿ ಮುಗಿದ ಮೇಲೆ ಕೋಚಿಂಗ್ ಪಡೆಯುತ್ತಿದ್ದಾನೆ. ಸದ್ಯ ಅವನು ಚೆನ್ನಾಗಿ ಓದಲು ಪ್ರಾರಂಭಿಸಿದ್ದಾನೆ. ಪೋಷಕರು ಹಾಗೂ ಶಿಕ್ಷಕರಿಂದ ಅವನ ಮೇಲಿದ್ದ ಒತ್ತಡ ಕಡಿಮೆಯಾಗಿದೆ. ನಾನು ವೈಯಕ್ತಿಕವಾಗಿ ಯುವ ಸ್ಪಂದನಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.