ಇಡೀ ವಿಶ್ವದಲ್ಲಿ ಯುವ ಜನಾಂಗವು ಅತ್ಯಮೂಲ್ಯ ಜನ ಸಮೂಹವಾಗಿದೆ. ಯುವ ಜನತೆಯು ಉತ್ಸಾಹ, ಶಕ್ತಿ, ಸಾಹಸ ಪ್ರವೃತ್ತಿ, ಕುತೂಹಲ ಮತ್ತು ಸಮಾಜ ಹಾಗೂ ಸಂಸ್ಕೃತಿಗೆ ಹೊಂದಿಕೊಳ್ಳುವ ಗುಂಪಾಗಿ ಗುರುತಿಸಲಾಗಿದೆ. ಪ್ರಸ್ತುತ, ಜಾಗತೀಕರಣ ಮತ್ತು ಉದಾರೀಕರಣ, ಯುವಜನರನ್ನು ಮಂದಗತಿಯ ಬದಲಾವಣೆಗೆ ಕಾರಣವಾಗುತ್ತಿದೆ. ಇದರಿಂದ, ಸಾಮಾಜಿಕ, ಮಾನಸಿಕ, ವರ್ತನೆ ಮತ್ತು ಮಾನಸಿಕ ಆರೋಗ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಅವರು ಎದುರಿಸುತ್ತಿದ್ದಾರೆ.
ಅಜ್ಞಾನ, ಕಳಂಕ ಮತ್ತು ಮಾನಸಿಕ ಆರೋಗ್ಯ ತಜ್ಞರ ಮತ್ತು ಸೌಲಭ್ಯಗಳ ಕೊರತೆಯಿಂದ ಭಾರತದಲ್ಲಿನ ಯುವ ಜನರ ಮಾನಸಿಕ ಆರೋಗ್ಯ ಬಲಿಯಾಗಿದೆ. ೨೦೧೧ ರ ಜನಗಣತಿಯ ಪ್ರಕಾರ ಭಾರತದಲ್ಲಿ ೩೭೫ ಮಿಲಿಯನ್ (ಶೇಕಡಾ ೩೦ ರಷ್ಟು) ಯುವಜನರಿದ್ದಾರೆ. ಇಡೀ ದೇಶದಲ್ಲಿ ಕೇವಲ ೪೦೦೦ ಮನೋವೈದ್ಯರು, ೧೦೦೦ ಮನಃಶಾಸ್ತ್ರಜ್ಞರು ಮತ್ತು ೩೦೦೦ ಸಾಮಾಜಿಕ ಕಾರ್ಯಕರ್ತರಿದ್ದಾರೆ. ಇದಕ್ಕೆ ಕಾರಣಗಳು ಅನೇಕ. ಕೆಲವೊಮ್ಮೆ, ತಜ್ಞರ ಸಹಾಯ ಇರಲಿ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಕುರಿತು ಹೇಳಿಕೊಳ್ಳುವುದು ಭಾರತದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಇಂದಿಗೂ ದುಸ್ಥರವೆನಿಸಿದೆ.
ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸ್ವಪ್ರೇರಣೆಯಿಂದ ಸಹಾಯವನ್ನು ಪಡೆಯಲು ಅರಿವು ಮತ್ತು ಸಾಮುದಾಯಿಕ ಶಿಕ್ಷಣದತ್ತ ಗಮನಹರಿಸುವ ಅಗತ್ಯವಿದೆ. ಸಾಂಸ್ಥಿಕ ಮತ್ತು ಸಾಮುದಾಯಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಲು ಪರಿಣಾಮಕಾರಿ ಕಾರ್ಯಕ್ರಮಗಳು ಕಳಂಕ ತಾರತಮ್ಯಗಳನ್ನು ಕಡಿಮೆ ಮಾಡಲು ಸಹಾಯವಾಗುವುದಲ್ಲದೆ ಯುವಜನರನ್ನು ಸಹಾಯ ಪಡೆಯುವಂತೆ ಪ್ರೇರೇಪಿಸುತ್ತದೆ. ‘ಯುವ ಸ್ಪಂದನ’ ಈ ಕೊರತೆಯನ್ನು ಗಮನಿಸಿದ್ದು ಸಮುದಾಯದ ಈ ಅವಶ್ಯಕತೆಯನ್ನು ಪೂರೈಸಲು ರೂಪಿತವಾಗಿದೆ.
ಸಮುದಾಯದ ಮಟ್ಟದಲ್ಲಿ ಸರ್ಕಾರದ ಮಾನಸಿಕ ಆರೋಗ್ಯ ಸೇವೆಗಳನ್ನು ನಿಮ್ಹಾನ್ಸ್ ಸಂಸ್ಥೆ ಸದಾ ಬೆಂಬಲಿಸುತ್ತಾ ಬಂದಿದೆ. ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಅನುಭವ ಹೊಂದಿದೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ‘ಯುವ ಸ್ಪಂದನ’ ಯೋಜನೆಯ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸುವುದು ನನಗೆ ಬಹಳ ಸಂತೋಷವಾಗಿದೆ. ಯುವಜನರ ಕುರಿತಾದ ಕಾರ್ಯಕ್ರಮಗಳಿಗೆ ವಿಭಿನ್ನ ರೀತಿಯ ಮಾರ್ಗ ಅನುಸರಿಸಬೇಕೆಂದು ನಿಮ್ಹಾನ್ಸ್ ಸಂಸ್ಥೆಗೆ ತಿಳಿದಿದೆ. ರಾಜ್ಯದ ಯುವಜನರಿಗಾಗಿಯೇ ಪ್ರತ್ಯೇಕವಾಗಿ ವಿಭಿನ್ನವಾಗಿ ವಿನ್ಯಾಸಗೊಳಿಸಿದ ಒಂದು ಕಾರ್ಯಕ್ರಮ “ಯುವ ಸ್ಪಂದನ”.
ಭಾರತದಲ್ಲೇ ಮೊಟ್ಟಮೊದಲ ಇಂತಹ ವಿನೂತನ ಕಾರ್ಯಕ್ರಮವನ್ನು ಕೈಗೊಂಡಿರುವ ನಿಮ್ಹಾನ್ಸ್ ಸಂಸ್ಥೆಯ ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗವನ್ನು ನಾನು ಅಭಿನಂದಿಸುತ್ತೇನೆ. ಇದು ರಾಜ್ಯದಲ್ಲಿ ಯುವಜನಾಂಗದ ಆರೋಗ್ಯ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯವ ಯುವಜನ ಸ್ನೇಹಿ, ಯುವಜನ ಪ್ರೇರಿತ, ಯುವಜನ ನಿರ್ದೇಶಿತ ಯೋಜನೆ ಎಂದು ನಾನು ನಂಬಿದ್ದೇನೆ.