ನಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನಸಿಕ, ನರರೋಗ, ಮದ್ದುಗಳಿಂದ ಉಂಟಾಗುವ ತೊಂದರೆಗಳು, ಅಪಘಾತಗಳು ಮತ್ತು ಇತರೆ ಸಾಂಕ್ರಾಮಿಕವಲ್ಲದ ರೋಗಗಳ ಮೇಲಿನ ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ಬಲಪಡಿಸಲು ೨೭ನೇ ನವೆಂಬರ್ ೨೦೧೨ ರಂದು ಜನ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲಾಯಿತು. ಯುವಜನತೆಯ ಮಾನಸಿಕ ಆರೋಗ್ಯದ ವಿಷಯಗಳನ್ನು ಹೆಚ್ಚಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನಾತ್ಮಕ, ತರಬೇತಿ ಮತ್ತು ಕ್ರಿಯಾತ್ಮಕ ಅಂಶಗಳನ್ನು ಸಧೃಡಗೊಳಿಸುವುದರಿಂದ ಸಮಾಜದಲ್ಲಿನ ಮಾನಸಿಕ ಆರೋಗ್ಯದ ಸಂಕೀರ್ಣ ಅಭಿವೃದ್ಧಿಗೆ ಪೂರಕವಾಗುತ್ತದೆಂದು ಜನ ಆರೋಗ್ಯ ಸಂಸ್ಥೆಯು ಧೃಡವಾಗಿ ನಂಬಿದೆ. ಈ ಧೃಡನಂಬಿಕೆಯನ್ನು ಸಾಕಾರಗೊಳಿಸಲು ಹಲವರ ಪಾಲ್ಗೊಳ್ಳುವಿಕೆ ಅವಶ್ಯಕವಾಗಿದೆ. ಸಬಲೀಕರಣದ ಮಾದರಿಯನ್ನು ಬಳಸಿ ಯುವಜನರ ಮಾನಸಿಕ ಆರೋಗ್ಯವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ “ಯುವ ಸ್ಪಂದನ” ಕಾರ್ಯಕ್ರಮ ಒಂದು ಪ್ರಯತ್ನವಾಗಿದೆ.
ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಮತ್ತು ವಿಶಿಷ್ಟ ಅವಶ್ಯಕತೆಗಳಿಂದ ಕೂಡಿದ ಯೌವನಾವಸ್ಥೆಯು ಜೀವನದ ಒಂದು ಪ್ರಮುಖ ಬದಲಾವಣೆಯ ಘಟ್ಟ. ಇಂದಿನ ಯುವಜನತೆ ವಿವಿಧ ಸವಾಲುಗಳು, ಹಲವು ಒತ್ತಡಗಳು, ಅತಿಯಾದ ನಿರೀಕ್ಷೆಗಳು ಇತ್ಯಾದಿಗಳಿಂದ ಪ್ರಭಾವಿತರಾಗಿದ್ದಾರೆ. ಸಾಮಾಜಿಕ, ಮನೋಸಾಮಾಜಿಕ, ಸ್ವಾಭಾವಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸವಾಲುಗಳನ್ನು ಯುವಜನರು ಎದುರಿಸುತ್ತಿದ್ದಾರೆ. ಇದು ಅವರ ಶಿಕ್ಷಣವೇ ಇರಲಿ, ವೃತ್ತಿಯೇ ಆಗಲಿ ಅಥವಾ ಸಂತುಷ್ಟ ಜೀವನ ನಡೆಸುವುದಕ್ಕೆ ಆಗಲೀ, ಒಟ್ಟಾರೆ ಅವರ ಸರ್ವಾಂಗೀಣ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
“ಯುವ ಸ್ಪಂದನ” ಒಂದು ವಿಶಿಷ್ಟ ಕಾರ್ಯಕ್ರಮ. ಪ್ರಾರಂಭದಿಂದ ಅನುಷ್ಠಾನದವರೆಗಿನ ಎಲ್ಲಾ ಹಂತಗಳಲ್ಲೂ ಭಾಗಿದಾರರನ್ನು ಗಣನೆಗೆ ತೆಗೆದುಕೊಂಡು ಚರ್ಚಿಸಿ ವಿನ್ಯಾಸಗೊಳಿಸಿದಂತ ವಿಶಿಷ್ಠ ಕಾರ್ಯಕ್ರಮ. ಇಂದಿನ ಜಗತ್ತಿನಲ್ಲಿ ಯುವಜನರು ಎದುರಿಸಬೇಕಾದ ಸವಾಲುಗಳನ್ನು ಇದು ಪರಿಗಣಿಸಿದೆ. “ಯುವ ಸ್ಪಂದನ” ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಯುಜನರು ಪ್ರಮುಖ ಪಾತ್ರವಹಿಸಿದ್ದಾರೆ. ಅವರು ತಮ್ಮ ಬೆಳವಣಿಗೆಗೆ ಅವಶ್ಯಕವಾದ ಎಲ್ಲ ವಿಷಯಗಳನ್ನು ಗುರುತಿಸಿ ಪಟ್ಟಿ ಮಾಡಲು ನಮ್ಮ ಪರಿಣಿತರ ತಂಡಕ್ಕೆ ನೆರವಾಗಿದ್ದಾರೆ. ಇತರೆ ಭಾಗಿದಾರರಾಗಿ ವಿವಿಧ ವಿಷಯಗಳ ಪರಿಣಿತರು, ಉದಾಹರಣೆಗೆ, ಸಮುದಾಯ ಆರೋಗ್ಯ ತಜ್ಞರು, ಮನೋವಿಜ್ಞಾನಿಗಳು, ಮಾನಸಿಕ ಆರೋಗ್ಯ ತಜ್ಞರು, ಜಿಲ್ಲಾ ಯುವ ಸಬಲೀಕರಣ ಅಧಿಕಾರಿಗಳು, ಯುವಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರೇತರ ಸಂಸ್ಥೆಗಳು ಯುವಜನತೆ ಹಾಗೂ ಪೋಷಕರು ಭಾಗವಹಿಸಿದ್ದಾರೆ. ಯುವಜನರ ಬೆಳವಣಿಗೆಗಾಗಿ ಸೇವೆ ಸಲ್ಲಿಸಲು ಮತ್ತು ಇಂತಹ ಒಂದು ವಿನೂತನ ಹಾಗೂ ಭಾರತದಲ್ಲಿಯೇ ಪ್ರಪ್ರಥಮ ಪ್ರಯತ್ನವಾದ ಕಾರ್ಯಕ್ರಮವನ್ನು ಕೈಗೊಳ್ಳಲು ಅವಕಾಶ ನೀಡಿ ನಮ್ಮ ಮೇಲೆ ನಂಬಿಕೆ ಇಟ್ಟಂತಹ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಅಭಿನಂದಿಸುತ್ತೇವೆ.