ನನ್ನ ಹೆಸರು ಮಧುಮತಿ, ತಾಂತ್ರಿಕ ಶಿಕ್ಷಣ ಓದುತ್ತಿದ್ದೇನೆ. ಪ್ರತಿದಿನ ಸ್ನೇಹಿತರ ಜೊತೆಗೂಡಿ ಟೀ ಕುಡಿಯಲು ಹೋಗುತ್ತಿದ್ದೆವು. ಅಲ್ಲಿ ಟೀ ಮಾರುವ ಹುಡುಗನ ಜೊತೆ ಸ್ನೇಹ ಬೆಳೆಯಿತು. ಕೆಲವೇ ತಿಂಗಳುಗಳ ನಂತರ ಅದು ಪ್ರೀತಿಗೆ ತಿರುಗಿತ್ತು. ನಾವಿಬ್ಬರು ಜೊತೆಯಾಗಿ ಓಡಾಡುತ್ತಿರುವುದು ನಮ್ಮ ಮನೆಯವರ ಗಮನಕ್ಕೆ ಬಂದು ನನಗೆ ತುಂಬಾ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ಆತನ ಜೊತೆ ಮಾತನಾಡದಂತೆ, ಓಡಾಡದಂತೆ ನನಗೆ ತಾಕೀತು ಮಾಡಿದ್ದರು. ಮನೆಗೆ ಸ್ವಲ್ಪ ತಡವಾಗಿ ಹೋದರೂ ಅನುಮಾನಿಸಿ ಬೈಯುತ್ತಿದ್ದರು. ಮೊಬೈಲ್ ಚೆಕ್ ಮಾಡುತ್ತಿದ್ದರು. ಇದರಿಂದ ನಾನು ತುಂಬಾ ಹಿಂಸೆ ಅನುಭವಿಸುತ್ತಿದ್ದೆ. ಓದಿನ ಕಡೆ ಗಮನಹರಿಸಲು ಸಾಧ್ಯವಾಗುತ್ತಿರಲ್ಲಿಲ್ಲ. ನಾನು ಮೊದಲಿನಂತೆ ಇಲ್ಲದಿರುವುದನ್ನು ಗಮನಿಸಿದ ನಮ್ಮ ಎನ್.ಎಸ್.ಎಸ್ ಘಟಕದ ಶಿಕ್ಷಕರು ನನ್ನನ್ನು ಕರೆದು ಮಾತನಾಡಿದರು. ಅವರು ನನ್ನ ಆತ್ಮೀಯ ಗುರುಗಳಾಗಿದ್ದರು ಹಾಗಾಗಿ ಅವರ ಬಳಿ ನಾನು ನನ್ನ ಜೀವನದಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ವಿವರಿಸಿದೆ.
ನಡೆದ ವಿಷಯವನ್ನು ಅವರ ಬಳಿ ತಿಳಿಸಿದ ನಂತರ ಅವರು ನನ್ನನ್ನು ಯುವ ಸ್ಪಂದನ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿನ ಯುವ ಸಮಾಲೋಚಕರ ಬಳಿ ಮಾತನಾಡಿದರು. ಯುವಸಮಾಲೋಚಕರು ನನ್ನ ಬಳಿ ಪ್ರತ್ಯೇಕವಾಗಿ ಮಾತನಾಡಿ ನಡೆದ ವಿಷಯವನ್ನು ವಿವರಿಸಲು ತಿಳಿಸಿದರು. ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ, ಈ ವಿಷಯ ಮನೆಗೆ ತಿಳಿದ ಮೇಲೆ ನನಗೆ ತುಂಬಾ ಹಿಂಸೆಯಾಗುತ್ತಿರುವುದನ್ನು ತಿಳಿಸಿದೆ. ನನಗೆ ಆ ಹುಡುಗನನ್ನು ಮರೆಯಲು ಅಥವಾ ಆತನ ಜೊತೆ ಮಾತನಾಡದೆ ಇರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮನೆಯಲ್ಲಿ ಎಲ್ಲರೂ ನನ್ನನ್ನು ಹೀಯಾಳಿಸಿ ಮಾತನಾಡುತ್ತಾರೆ ಮತ್ತು ಆತನ ಜೊತೆ ಸಂಬಂಧ ಮುಂದುವರಿಸಿದರೆ ಕಾಲೇಜಿಗೂ ಕಳಿಸುವುದಿಲ್ಲ ಎಂದು ಹೆದರಿಸುತಿದ್ದರು.
ಮನೆ ಬಿಟ್ಟು ಎಲ್ಲದರೂ ಓಡಿಹೋಗಬೇಕು ಎಂದು ಅನಿಸುತ್ತಿದೆ ಎಂದು ನನಗಾಗುತ್ತಿರುವ ತಳಮಳ ಗೊಂದಲವನ್ನು ವಿವರಿಸಿದೆ. ಎಲ್ಲವನ್ನು ಆಲಿಸಿ ನಂತರ ಅವರು ನನ್ನ ವಯ್ಯಸ್ಸಿನ ಚಂಚಲತೆಯ ಬಗ್ಗೆ ನನಗೆ ಅರಿವು ಮೂಡಿಸಿದರು. ನಿಮಗೆ ಆ ತರ ಭಾವನೆ ಬಂದಿರುವುದು ತಪ್ಪಲ್ಲ ಆದರೆ ಪ್ರೀತಿ ಮತ್ತು ಆಕರ್ಷಣೆ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಮುಖ್ಯ ಎಂದು ಅವರು ಅವೆರಡರ ನಡುವಿನ ವ್ಯತ್ಯಾಸವನ್ನು ವಿವರಿಸಿದರು. ಪ್ರೀತಿ ಆಕರ್ಷಣೆಯಲ್ಲದೆ ನಿಜವಾದ ಪ್ರೀತಿಯಾಗಿದ್ದಲ್ಲಿ ಇನ್ನು ಎರಡು ಮೂರು ವರ್ಷಗಳ ನಂತರವೂ ಗಟ್ಟಿಯಾಗಿ ಉಳಿದಿರುತ್ತದೆ ಮತ್ತು ಆಗ ವಯಸ್ಸಿನ ಅಡ್ಡಿ ಆತಂಕಗಳಿಲ್ಲದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಮನವರಿಕೆ ಮಾಡಿದರು. ನಂತರ ಅವರು ನನ್ನ ಮನೆಯವರನ್ನು ಕರೆದು ಅವರ ಜೊತೆಗೂ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅವರು ನನ್ನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಉಲ್ಲೇಖ ಮಾಡಿದರು. ಈಗ ನಾನು ನನ್ನ ವಿದ್ಯಾಭ್ಯಾಸವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಡಿಯಲ್ಲಿ ಮುಂದುವರಿಸುತ್ತಿದ್ದೇನೆ. ಯುವ ಸ್ಪಂದನ ಕೇಂದ್ರಕ್ಕೆ ಧನ್ಯವಾದಗಳು.