ನಾನು ರವಿ, ವೃತ್ತ ಪತ್ರಿಕೆಯೊಂದರ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಾಯಿಗೆ ಕೆಲವು ದಿನಗಳಿಂದ ತಲೆನೋವು, ಸುಸ್ತು ಕಾಣಿಸತೊಡಗಿತ್ತು. ಹಾಗಾಗಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿನ ವೈದ್ಯರು ಅವರಿಗೆ ಔಷಧಿ ನೀಡಿ ಕಳುಹಿಸಿದ್ದರು. ಆದರೆ ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಹಾಗಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಆಕೆಯ ಮಿದುಳಿನಲ್ಲಿ ಗಡ್ಡೆ ಇದೆ ಎಂದು ತಿಳಿಸಿದರು. ಇದನ್ನು ತಿಳಿದು ನಮಗೆ ಆಘಾತವಾಯಿತು ಮತ್ತು ಭವಿಷ್ಯವು ತುಂಬಾ ಭಯಾನಕವೆನಿಸತೊಡಗಿತು. ನಾವು ನಮ್ಮ ತಾಯಿಯನ್ನು ಒಂದು ಪ್ರತಿಷ್ಠಿತ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ವೈದ್ಯರು ಪರೀಕ್ಷಿಸಿ ಗಡ್ಡೆ ಇರುವುದನ್ನು ದೃಢಪಡಿಸಿದರು ಮತ್ತು ನಮ್ಮನ್ನು ಕರೆದು ಚಿಕಿತ್ಸೆಗೆ ಇರುವ ಮಾರ್ಗಗಳನ್ನು ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳನ್ನು ತಿಳಿಸಿದರು. ಅವರು ನೀಡಿದ ಎಲ್ಲಾ ಆಯ್ಕೆಗಳಲ್ಲೂ ಅಡ್ಡಪರಿಣಾಮಗಳು ಇದ್ದ ಕಾರಣ ನನಗೆ ಮತ್ತು ಕುಟುಂಬದವರಿಗೆ ಯಾವ ರೀತಿಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಬಗ್ಗೆ ತುಂಬಾ ಆತಂಕ ಮತ್ತು ಗೊಂದಲವಾಗಿತ್ತು. ಎಲ್ಲರೂ ವಿವಿಧ ರೀತಿಯ ಸಲಹೆಗಳನ್ನು ನೀಡಲು ಪ್ರಾರಂಭಿಸಿದ್ದರು ಅದರಿಂದ ನಮ್ಮ ಆತಂಕ ಹೆಚ್ಚಾಗಿತ್ತು.
ಆ ಸಮಯದಲ್ಲಿ, ಗೆಳೆಯನೊಬ್ಬನಿಂದ ಯುವ ಸ್ಪಂದನ ಕೇಂದ್ರದ ಬಗ್ಗೆ ತಿಳಿದು ನಾನು ಅಲ್ಲಿಗೆ ಭೇಟಿ ನೀಡಿದೆ. ಅಲ್ಲಿನ ಮಾರ್ಗದರ್ಶಕರು ನಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಆಲಿಸಿದರು ಮತ್ತು ಅರ್ಥಮಾಡಿಕೊಂಡು ನನಗೆ ಭಾವನಾತ್ಮಕ ಬೆಂಬಲ ಒದಗಿಸಿದರು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಮೊದಲು ನಾವು ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗಗಳನ್ನು ಮುಂದಿಟ್ಟುಕೊಂಡು ಅವುಗಳ ಸಾಧಕ ಭಾದಕಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯಕ. ಅದೇ ರೀತಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಆ ವಿಷದ ಕುರಿತು ಸಂಪೂರ್ಣ ಅರಿವು ಇರುವ ವ್ಯಕ್ತಿ ನಮ್ಮೊಂದಿಗಿರುವುದು ಸೂಕ್ತ ಎಂದು ತಿಳಿಸಿದರು. ಅವರು ಹೇಳುತ್ತಿರುವುದು ನನಗೂ ಸರಿಯೆನಿಸಿತು. ನಂತರ ಅವರು ನನಗೆ ಒಬ್ಬ ಒಳ್ಳೆಯ ವೈದ್ಯರನ್ನು ಸೂಚಿಸಿ ಅವರಿಂದ ಮಾರ್ಗದರ್ಶನ ಪಡೆಯಲು ತಿಳಿಸಿದರು.
ಆ ವೈದ್ಯರನ್ನು ನಾನು ಮತ್ತು ನನ್ನ ಕೆಲವು ಹತ್ತಿರದ ಸಂಬಂಧಿಕರು ಭೇಟಿ ನೀಡಿ ನಮ್ಮ ತಾಯಿಯ ಚಿಕಿತ್ಸೆಯ ವಿಷಯಗಳನ್ನು ಚರ್ಚಿಸಿದೆವು. ಅವರು ತಾಯಿಯ ಚಿಕಿತ್ಸೆಗೆ ಇರುವ ಎಲ್ಲಾ ಮಾರ್ಗಗಳನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ನಮಗೆ ಸೂಕ್ತವೆನಿಸುವ ಆಯ್ಕೆಯನ್ನು ಆರಿಸಲು ಸಹಾಯ ಮಾಡಿದರು. ಅವರಿಂದ ನಮಗೆ ಮತ್ತು ನನ್ನ ತಾಯಿಗೆ ಮಾನಸಿಕ ಬೆಂಬಲವೂ ದೊರೆಯಿತು. ನಂತರ ಚಿಕಿತ್ಸೆ ಕೊಡಿಸಿದೆವು ಈಗ ಅವರ ಆರೋಗ್ಯವು ಸುಧಾರಣೆಯಾಗಿದೆ. ಈ ಸಂದಿಗ್ಧತೆಯ ಸನ್ನಿವೇಶದಲ್ಲಿ ನಮಗೆ ದಾರಿದೀಪವಾದ ಯುವ ಸ್ಪಂದನಕ್ಕೆ ನಾನು ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.