ನಾನು ಸಮರ್ಥ್, ಮೂಲತಃ ಶಿವಮೊಗ್ಗ ಜಿಲ್ಲೆ. ನನ್ನ ಕುಟುಂಬದೊಂದಿಗೆ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ನನಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹಾಗಾಗಿ, ಶಾಲಾದಿನಗಳಲ್ಲಿ ನಾನು ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ನಂತರ ಕಾಲೇಜು ಮಟ್ಟದಲ್ಲಿ ಹಲವು ಬಾರಿ ವಲಯ, ತಾಲ್ಲೂಕು ಮತ್ತು ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದೇನೆ. ಇದರೊಂದಿಗೆ, ಭಾರತೀಯ ಸೇನೆಯನ್ನು ಸೇರಿ ಕೆಲಸ ಮಾಡಬೇಕೆಂಬುದು ನನ್ನ ಕನಸು. ಹಾಗಾಗಿ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸೇನಾ ಆಯ್ಕೆ ಶಿಬಿರಗಳಲ್ಲಿ ಹಲವು ಬಾರಿ ಭಾಗವಹಿಸಿ ಪ್ರಯತ್ನಿಸಿದ್ದೆ. ಆದರೆ ಅದರಲ್ಲಿ ನಾನು ಆಯ್ಕೆಯಾಗಿರಲಿಲ್ಲ. ಇದೊಂದು ದೊಡ್ಡ ಕೊರಗು ನನ್ನನ್ನು ಯಾವಾಗಲೂ ಕಾಡುತಿತ್ತು. ನಾನು ಇಷ್ಟೆಲ್ಲಾ ದೈಹಿಕವಾಗಿ ಸದೃಢನಾಗಿದ್ದು, ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಹೊಂದಿದ್ದಾಗ್ಯೂ ಏತಕ್ಕಾಗಿ ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣನಾಗುತ್ತಿಲ್ಲ ಎಂಬುದು ತಿಳಿಯದಾಗಿತ್ತು.
ಈ ಸಂದರ್ಭದಲ್ಲಿ ಯುವ ಪರಿವರ್ತಕರು ನಾನು ಓದುತಿದ್ದ ಕಾಲೇಜಿನಲ್ಲಿ ಯುವ ಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಗ ಯುವ ಸ್ಪಂದನ ಕಾರ್ಯಕ್ರಮದಿಂದ ನನಗೆ ಸಹಕಾರ ದೊರೆಯುತ್ತದೆ ಎನ್ನುವುದು ತಿಳಿಯಿತು.
ಸ್ವಲ್ಪ ದಿನಗಳ ನಂತರ ನಾನು ಯುವ ಸ್ಪಂದನ ಕೇಂದ್ರಕ್ಕೆ ಹೋದೆ. ಅಲ್ಲಿ ಯುವ ಸಮಾಲೋಚಕರು ನನ್ನ ಜೊತೆ ಮಾತನಾಡಿದರು. ಹೀಗೆ ಮಾತನಾಡುತ್ತಿರುವಾಗ ಅವರು ಸೇನೆಗೆ ಸೇರಲು ಜಿಲ್ಲಾ ಮಟ್ಟದಲ್ಲಿ ತರಬೇತಿ ಶಿಬಿರಗಳು ಇರುವುದನ್ನು ತಿಳಿಸಿದರು. ಅದೂ ಸಹ ಉಚಿತವಾಗಿ ನಮ್ಮ ಜಿಲ್ಲೆಯಲ್ಲಿ ದೊರೆಯುವ ತರಬೇತಿಯ ಬಗ್ಗೆಯೂ ಅವರು ಮಾಹಿತಿ ನೀಡಿದರು. ಇದಲ್ಲದೇ, ಅವರು ನಾನು ಈಗಾಗಲೇ ಹಲವು ಬಾರಿ ಪ್ರಯತ್ನಿಸಿ ಸೋತಿದ್ದರಿಂದ ನನ್ನ ಆತ್ಮವಿಶ್ವಾಸ ಕಡಿಮೆಯಾಗಿತ್ತು. ಇದರ ಬಗ್ಗೆಯೂ ಸಹ ಅವರು ಚರ್ಚಿಸಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಕರಿಸಿದರು.
ಸದ್ಯ ನಾನು ಒಂದು ತರಬೇತಿಯಲ್ಲಿ ಭಾಗವಹಿಸುತ್ತಿದ್ದೇನೆ. ನನಗನಿಸುತ್ತಿದೆ ಮುಂದಿನ ವರ್ಷ ನಡೆಸುವ ಸೇನಾಆಯ್ಕೆ ಪ್ರಕ್ರಿಯೆಯಲ್ಲಿ ನಾನು ಆಯ್ಕೆಯಾಗುತ್ತೇನೆ ಎಂದು. ಒಟ್ಟಿನಲ್ಲಿ ಯುವ ಸ್ಪಂದನ ಕಾರ್ಯಕ್ರಮದಿಂದ ನನಗೆ ನನ್ನ ಜೀವನ ರೂಪಿಸಿಕೊಳ್ಳಲು ಸಹಕಾರವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ, ನನಗೆ ದಾರಿತೋರಿದ ಯುವ ಸ್ಪಂದನ ಕಾರ್ಯಕ್ರಮಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ.