ನನ್ನ ಹೆಸರು ಶ್ರಾವಣಿ, ನಾನು ವಿಜ್ಞಾನ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ಇತ್ತೀಚಿಗೆ ನನ್ನ ಗಮನಶಕ್ತಿ ಕಡಿಮೆಯಾಗುತ್ತಿದೆ ಎನಿಸುತ್ತಿದೆ. ತರಗತಿಯಲ್ಲಿ ನಮ್ಮ ಪ್ರಾಧ್ಯಾಪಕರು ಪಾಠವನ್ನು ಮಾಡುತ್ತಿದ್ದರೆ ಅದನ್ನು ಗಮನವಿಟ್ಟು ಕೇಳಲಾಗುತ್ತಿರಲ್ಲಿಲ್ಲ. ತರಗತಿಯ ಪರಿಸರದಲ್ಲಿ ಆಗುತ್ತಿರುವ ಚಿಕ್ಕಪುಟ್ಟ ಶಬ್ದ, ಕಾರಿಡಾರ್ನಲ್ಲಿ ಇತರರು ಓಡಾಡುವ ದೃಶ್ಯ ಇತ್ಯಾದಿ ಅಂಶಗಳಿಂದ ಬಹುಬೇಗನೆ ನಾನು ವಿಚಲಿತಗೊಳ್ಳುತ್ತಿದ್ದೆ. ಜೊತೆಗೆ ಕಾಲೇಜಿನಲ್ಲಿ ಕೇಳಿಸಿಕೊಂಡ ಪಾಠವನ್ನು ಅಲ್ಲಿಯೇ ಮರೆತುಬಿಡುತ್ತಿದ್ದೆ. ಹೀಗಾಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತಿತ್ತು. ಇದರಿಂದ ನನಗೆ ಬೇಜಾರು ಹಾಗೂ ಪರೀಕ್ಷಾ ಭಯ ಕಾಡತೊಡಗಿತು. ಏನು ಮಾಡಬೇಕೆಂದು ತಿಳಿಯುತ್ತಿರಲ್ಲಿಲ್ಲ. ಈ ಬಗ್ಗೆ ನಾನು ನನ್ನ ಸ್ನೇಹಿತರ ಸಲಹೆಗಳನ್ನು ಕೇಳಿ ಅದರಂತೆ ನಡೆದುಕೊಂಡೆ. ಆದರೆ ಅದರಿಂದ ನನಗೆ ಏನೂ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಕಾಲೇಜಿನಲ್ಲಿ ಆಲೋಜಿಸಲಾಗಿದ್ದ ಯುವಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕಾರ್ಯಕ್ರಮದ ನಂತರ ಫೀಡ್ ಬ್ಯಾಕ್ ಫಾರ್ಮ್ಗಳನ್ನು ಕೊಟ್ಟು ನಮ್ಮ ಸಮಸ್ಯೆಯನ್ನು ಅದರಲ್ಲಿ ಬರೆಯಲು ತಿಳಿಸಿದರು. ಅದರಂತೆ ನಾನು ನನ್ನ ಸಮಸ್ಯೆಯನ್ನು ಬರೆದುಕೊಟ್ಟೆ. ಕೆಲವು ದಿನಗಳ ತರುವಾಯ ನಾನು ಫೀಡ್ ಬ್ಯಾಕ್ ಫಾರ್ಮ್ನಲ್ಲಿ ಕೇಳಿದ ಸಹಾಯಕ್ಕಾಗಿ ಕರೆ ಮಡಿ ಮಾತನಾಡಿದರು.
ಆಗ ನಾನು ಯುವಸ್ಪಂದನ ಕೇಂದ್ರಕ್ಕೆ ಹೋದೆ. ಅಲ್ಲಿ ಯುವಸಮಾಲೋಚಕರು ನನ್ನನ್ನು ಮಾತನಾಡಿಸಿ ಕುಳಿತುಕೊಳ್ಳಲು ತಿಳಿಸಿದರು. ನಾನು ವಿಶ್ರಮಿಸಿದ ನಂತರ ನನ್ನ ಜೊತೆ ನನ್ನ ಸಮಸ್ಯೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನಮ್ಮ ಕುಟುಂಬ, ನನ್ನ ಹವ್ಯಾಸ, ಅಭ್ಯಾಸ, ಮನಸ್ಥಿತಿ ಇತ್ಯಾದಿಗಳ ಬಗ್ಗೆ ನನ್ನೊಂದಿಗೆ ಕೇಳಿಕೊಂಡರು. ನಂತರ ನಾನು ಹೇಳಿದ್ದನ್ನೆಲ್ಲಾ ಸಾರಾಂಶ ರೂಪದಲ್ಲಿ ಅವರು ನನಗೆ ಹೇಳಿದರು. ಆಗ ನನಗೆ ಅನಿಸಿದ್ದೇನೆಂದರೆ ಗಮನಶಕ್ತಿಯ ಸಮಸ್ಯೆಯು ನನಗೆ ಇತ್ತೀಚೆಗೆ ಶುರುವಾಗಿರುವುದು ಎಂದು. ಈ ಮುಂಚೆ ನನಗೆ ಈ ಸಮಸ್ಯೆ ಅಷ್ಟಾಗಿ ಇರಲ್ಲಿಲ್ಲ. ಮುಂದುವರಿದು ಚರ್ಚಿಸಲಾಗಿ ವಾತಾವರಣ (ತರಗತಿ) ಬದಲಾವಣೆ, ಸಹಪಾಠಿಗಳ ಬದಲಾವಣೆ ಇತ್ಯಾದಿ ಅಂಶಗಳಿಂದ ಸರಿಯಾಗಿ ಸಮಯಪಾಲನೆ ಮತ್ತು ಓದುವ ಹವ್ಯಾಸವನ್ನು ಮಾಡಲಾಗುತ್ತಿಲ್ಲ ಎಂಬುದು ತಿಳಿಯಿತು. ಇದರ ಜೊತೆಗೆ ಓದುವ ಸಮಯವನ್ನು ಯೋಜಿಸುವ ವಿಧಾನವನ್ನು ತಿಳಿಸಿಕೊಟ್ಟರು. ಅವರ ಮಾರ್ಗದರ್ಶನದಂತೆ ನಾನು ಒಂದು ಟೈಮ್ ಟೇಬಲ್ನ್ನು ಸಿದ್ದಪಡಿಸಿಕೊಂಡು ಅದರಂತೆ ಓದಲು ಪ್ರಾರಂಭಿಸಿದೆ. ಮೊದಲಿಗೆ ಈ ರೀತಿ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಅವರು ನನ್ನ ಜೊತೆ ಚರ್ಚಿಸಿದಂತೆ ವೇಳಾಪಟ್ಟಿಯನ್ನು ಅನುಸರಿಸುವಲ್ಲಿ ಮೊದಲಿಗೆ ಈ ರೀತಿ ಕಷ್ಟವಾಗುವುದು ಸಹಜ ಎಂಬುದು ನೆನಪಿಗೆ ಬಂದು, ನನ್ನ ಪ್ರಯತ್ನವನ್ನು ಮುಂದುವರಿಸಿದೆ. ಹೀಗೆ ದಿನಗಳೆದಂತೆ ನನ್ನ ಗಮನಶಕ್ತಿ ಹೆಚ್ಚಾಗಿದೆ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಭಯ, ಆತಂಕ ಕಡಿಮೆಯಾಗಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದೇನೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಸಹಕಾರವಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು ಯುವಸ್ಪಂದನ ಕಾರ್ಯಕ್ರಮದ ಯುವಸಮಾಲೋಚಕರ ಮಾರ್ಗದರ್ಶನದಿಂದ. ಹಾಗಾಗಿ ಯುವಸ್ಪಂದನ ಕಾರ್ಯಕ್ರಮಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.